ಮಡಿಕೇರಿ | ಕಾಫಿ ತೋಟದ ಕೆರೆಗೆ ಬಿದ್ದು ಕಾಡಾನೆ ಸಾವು
ಮೃತಪಟ್ಟಿರುವ ಕಾಡಾನೆ
ಮಡಿಕೇರಿ : ಆಹಾರ ಅರಸಿ ಕಾಡಿನಿಂದ ಕಾಫಿ ತೋಟಕ್ಕೆ ಬಂದಿದ್ದ ಕಾಡಾನೆಗಳ ಗುಂಪಿನ ಪೈಕಿ 13 ವರ್ಷದ ಗಂಡು ಕಾಡಾನೆಯೊಂದು ಆಕಸ್ಮಿಕವಾಗಿ ಕೆರೆಯಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಅಮ್ಮತ್ತಿ ಸಮೀಪದ ಒಂಟಿಯಂಗಡಿಯ ಪಚ್ಚಾಟ್ ಎಂಬಲ್ಲಿ ನಡೆದಿದೆ.
ನಂದ ಎಂಬುವವರಿಗೆ ಸೇರಿದ ಕೆರೆಗೆ ಬಿದ್ದ ಕಾಡಾನೆಯೊಂದು ಮೇಲೆ ಬರಲು ಸಾಧ್ಯವಾಗದೆ ನೀರಿನಲ್ಲಿ ಸಿಲುಕಿ ಮೃತಪಟ್ಟಿದೆ ಎನ್ನಲಾಗಿದೆ. ಕಾಫಿ ತೋಟಗಳಲ್ಲಿ ಬಿಡು ಬಿಟ್ಟಿದ್ದ ಕಾಡಾನೆಗಳು ರಾತ್ರಿ ಪಚ್ಚಾಡ್ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಣಿಸಿಕೊಂಡಿತ್ತು.
ಈ ವಿಷಯ ತಿಳಿದ ತೋಟದ ಮಾಲೀಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಡಿಎಫ್ ಓ ಜಗನ್ನಾಥ್ , ಎಸಿಎಫ್ ನೆಹರು, ಆರ್ಎಫ್ಓ ಕಳ್ಳಿರ ಎಂ.ದೇವಯ್ಯ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೀರಿನಲ್ಲಿದ್ದ ಆನೆಯ ಮೃತ ದೇಹವನ್ನು ಜೆಸಿಬಿ ಮೂಲಕ ಹೊರ ತೆಗೆದ ನಂತರ ವನ್ಯಜೀವಿ ವೈದ್ಯರಾದ ಡಾ.ಚೆಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಗುಂಡಿ ತೆಗೆದು ಅಂತ್ಯಸಂಸ್ಕಾರ ಮಾಡಲಾಗಿದೆ.