ಮಡಿಕೇರಿ: ವಿದ್ಯಾರ್ಥಿನಿ ಕೊಲೆ ಪ್ರಕರಣ| ಆರೋಪಿಯ ಮೃತದೇಹ ಪತ್ತೆಯಾಗಿಲ್ಲ, ಆತ್ಮಹತ್ಯೆ ಬಗ್ಗೆ ಖಾತ್ರಿ ಪಡಿಸಲು ಸಾಧ್ಯವಿಲ್ಲ: ಎಸ್ಪಿ ಸ್ಪಷ್ಟನೆ
ಆರೋಪಿಯ ಪತ್ತೆಗೆ ಮುಂದುವರಿದ ಕಾರ್ಯಾಚರಣೆ; ಕುಟುಂಬದ ಸದಸ್ಯರಿಗೆ ರಕ್ಷಣೆ
ಆರೋಪಿ ಪ್ರಕಾಶ್
ಮಡಿಕೇರಿ: ಸೂರ್ಲಬ್ಬಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮೀನಾ (16) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಕೆಲವು ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಿದ ಎಸ್ಪಿ, ಆರೋಪಿಯ ಮೃತದೇಹ ಪತ್ತೆಯಾಗದೆ ಇರುವುದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಖಾತ್ರಿ ಪಡಿಸಲು ಸಾಧ್ಯವಿಲ್ಲ ಎಂದು ಸ್ಪಷನೆ ನೀಡಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿಯಲ್ಲಿದ್ದ ಏಕೈಕ ವಿದ್ಯಾರ್ಥಿನಿ ಯು.ಎಸ್. ಮೀನ ಈ ಬಾರಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಇದರ ಸಂತೋಷದ ನಡುವೆಯೇ ಮನೆಯವರು ವಿದ್ಯಾರ್ಥಿನಿಗೆ ಪಕ್ಕದ ಹಮ್ಮಿಯಾಲ ಗ್ರಾಮದ ಪ್ರಕಾಶ್ (32) ಎಂಬಾತನೊಂದಿಗೆ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ತಿಳಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ 18 ವರ್ಷದ ನಂತರ ವಿವಾಹ ಮಾಡುವಂತೆ ಕಾನೂನಿನ ಅರಿವು ಮೂಡಿಸಿದ್ದರು. ನಂತರ ಎರಡೂ ಮನೆಯವರು ಮೀನಾಳಿಗೆ 18 ವರ್ಷ ತುಂಬಿದ ಮೇಲೆ ವಿವಾಹ ಮಾಡಲು ನಿಶ್ಚಯಿಸಿದರು. ಇದರಿಂದ ಕುಪಿತಗೊಂಡ ಪ್ರಕಾಶ್ ಗುರುವಾರ ಸಂಜೆ ವೇಳೆ ಮೀನಾಳ ಮನೆಗೆ ಬಂದು ಆಕೆಯ ತಂದೆ, ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಮೀನಾಳನ್ನು ಸ್ವಲ್ಪ ದೂರ ಎಳೆದೊಯ್ದು ತಲೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾನೆ ಎಂದು ಎಸ್ಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.
ಆರೋಪಿ ಪ್ರಕಾಶ್ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಮೃತ ಮೀನಾ ತಂದೆ, ತಾಯಿ, ಮೂವರು ಸಹೋದರಿಯರು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾಳೆ. ಮೀನಾ ಕೊನೆಯ ಪುತ್ರಿಯಾಗಿದ್ದಾಳೆ.
ಪ್ರಕಾಶ್ ಹಲ್ಲೆಯಿಂದ ಗಾಯಗೊಂಡಿರುವ ತಾಯಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕುಟುಂಬದ ಸದಸ್ಯರಿಗೆ ರಕ್ಷಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಕೆ.ರಾಮರಾಜನ್, ತೀವ್ರವಾಗಿ ಗಾಯಗೊಂಡಿರುವ ಮೀನಾಳ ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿಸಿದರು.
ಮೀನಾಳನ್ನು ಭೀಕರವಾಗಿ ಹತ್ಯೆಗೈದಿರುವುದರಿಂದ ಆಕೆಯ ತಂದೆ, ತಾಯಿ ಹಾಗೂ ಕುಟುಂಬದ ಸದಸ್ಯರಿಗೂ ಪೊಲೀಸ್ ಭದ್ರತೆ ನೀಡಲಾಗುತ್ತಿದೆ. ತಾಯಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಮತ್ತು ಸೂರ್ಲಬ್ಬಿಯ ಮನೆಯ ಸಮೀಪ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆರೋಪಿ ಪ್ರಕಾಶ್ ಕೊಲೆ ಮಾಡುವ ಸಂದರ್ಭ ವಾಹನದೊಂದಿಗೆ ಮತ್ತೊಬ್ಬ ವ್ಯಕ್ತಿಯೂ ಇದ್ದ ಎಂದು ತಿಳಿದು ಬಂದಿದ್ದು, ಈತನ ಪತ್ತೆಗೂ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಆತ್ಮಹತ್ಯೆ ಖಚಿತವಿಲ್ಲ
ಆರೋಪಿ ಪ್ರಕಾಶ್ ತನ್ನ ಮನೆಯ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವ್ಯಾಪಕವಾಗಿ ಸುದ್ದಿ ಹಬ್ಬಿದ ಕುರಿತು ಸ್ಪಷ್ಟೀಕರಣ ನೀಡಿರುವ ಎಸ್ಪಿ ಕೆ.ರಾಮರಾಜನ್ ಅವರು, ಆರೋಪಿಯ ಮೃತದೇಹ ಪತ್ತೆಯಾಗದೆ ಇರುವುದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಖಾತ್ರಿ ಪಡಿಸಲು ಸಾಧ್ಯವಿಲ್ಲ ಮತ್ತು ಖಚಿತವಲ್ಲ ಎಂದು ತಿಳಿಸಿದರು.