ಮಡಿಕೇರಿ | ಪಿಎಸ್‌ಐ ತಾಜುದ್ದೀನ್‌ಗೆ ಮುಖ್ಯ ಮಂತ್ರಿಗಳ ಚಿನ್ನದ ಪದಕ

ಮಡಿಕೇರಿ : ಕರ್ತವ್ಯ ನಿಷ್ಠೆ ಹಾಗೂ ಅತ್ಯುತ್ತಮ ಸೇವೆಗಾಗಿ ನೀಡುವ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಕೊಡಗು ಮೂಲದ ಪಿಎಸ್ಐ ತಾಜುದ್ದೀನ್ ರವರು ಭಾಜನರಾಗಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಟಿ.ಎ.ಮುಹಮ್ಮದ್ ಎಂಬವರ ಮಗ ಟಿ.ಎನ್.ತಾಜುದ್ದೀನ್ ಪ್ರಸ್ತುತ ಚಾಮರಾಜನಗರ ತಾಲೂಕಿನ ಸಂತೆಮರಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ದಕ್ಷ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದೆ.
ಸಂತೇಮರಹಳ್ಳಿ ಹಾಗೂ ಕುದೇರು ಪೊಲೀಸ್ ಠಾಣೆಯಲ್ಲಿ ಅತ್ಯುತ್ತಮ ಜನಸೇವೆಯೊಂದಿಗೆ ಜನಸ್ನೇಹಿ ಮಾದರಿ ಪೊಲೀಸ್ ಠಾಣೆಯನ್ನಾಗಿ ಮಾಡಿ ದೇಶದಲ್ಲಿ ಕುದೇರು ಪೊಲೀಸ್ ಠಾಣೆಯು 5 ನೇ ಅತ್ಯುತ್ತಮ ಪೊಲೀಸ್ ಠಾಣೆ ಎಂಬ ಪ್ರಶಸ್ತಿಯೊಂದಿಗೆ ರಾಜ್ಯದಲ್ಲೂ ನಂ-1 ಅತ್ಯುತ್ತಮ ಜನಸ್ನೇಹಿ ಪೊಲೀಸ್ ಠಾಣೆ ಎಂಬ ಬಿರುದು ಪೊಲಿಸ್ ಠಾಣೆಗೆ ದೊರಕಿದೆ. ಈ ಹಿಂದೆ ನಡೆದ ಪೊಲೀಸ್ ಕರ್ತವ್ಯ ಕೂಟದ ವಲಯ ಮಟ್ಟದ ಸ್ಪರ್ಧೆಯಲ್ಲಿ ಸತತ ಮೂರು ಬಾರಿ ಚಿನ್ನ ಬೆಳ್ಳಿ ಪದಕವು ಲಭಿಸಿದೆ.
ಕುದೇರು ಮತ್ತು ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಹಲವಾರು ವರ್ಷಗಳಿಂದ ಯಾವುದೇ ಲೋಪ ದೋಷ ಮುಕ್ತ ಅಧಿಕಾರಿಯಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡುವ ಮೂಲಕ ಸಾರ್ವಜನಿಕರಲ್ಲಿ ಕಾನೂನು ಅರಿವು ಜಾಗೃತಿ ಮೂಡಿಸುವುದರೊಂದಿಗೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಹಲವಾರು ಅಪರಾಧ ಪ್ರಕರಣಗಳನ್ನ ಪತ್ತೆ ಹಚ್ಚಿದ್ದಾರೆ. 2008ರಲ್ಲಿ ಕೊಡಗು ಜಿಲ್ಲೆಯಲ್ಲಿ ಡಿಎಆರ್ ಪೊಲೀಸ್ ಕಾನ್‌ಸ್ಟೇಬಲ್, 2011 ರಲ್ಲಿ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್, 2014-2017 ವರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಚಾಮರಾಜನಗರ ಜಿಲ್ಲೆಯ ಪೂರ್ವ ಠಾಣೆ, ಕೊಳ್ಳೇಗಾಲ ಪಟ್ಟಣ ಠಾಣೆ, ಕುದೇರು ಪೊಲೀಸ್ ಠಾಣೆ, ಸಂತೇಮರಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.