ಮಡಿಕೇರಿ: ಗಾಳಿಯಲ್ಲಿ ಗುಂಡು ಹಾರಿಸಿ ವ್ಯಕ್ತಿಯನ್ನು ಕಾಡಾನೆ ದಾಳಿಯಿಂದ ರಕ್ಷಿಸಿದ ಬೆಳೆಗಾರ
ಮಡಿಕೇರಿ: ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಸಂದರ್ಭ ಬೆಳೆಗಾರರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ, ಆ ವ್ಯಕ್ತಿಯನ್ನು ಪಾರು ಮಾಡಿದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.
ಪಾಲಿಬೆಟ್ಟದಿಂದ ಲೂಡ್ರ್ಸ್ ಶಾಲೆ ಬಳಿ ಇರುವ ಮನೆಗೆ ತೆರಳುತ್ತಿದ್ದ ವಾಹನ ಚಾಲಕ ಚಂದ್ರ ಎಂಬವರ ಮೇಲೆ ಕಾಡಾನೆ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡಿರುವ ಚಂದ್ರ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಂದ್ರ ಅವರು ರಾತ್ರಿ ಮನೆಗೆ ತೆರಳುತ್ತಿದ್ದ ಸಂದರ್ಭ ಕಾಫಿ ತೋಟದಿಂದ ಹಠಾತ್ತನೆ ಬಂದ ಕಾಡಾನೆಯೊಂದು ದಾಳಿ ಮಾಡಿತು. ತಪ್ಪಿಸಿಕೊಳ್ಳಲು ತೋಟದ ಗೇಟ್‍ನೊಳಗೆ ನುಸಳಿದಾಗ ಕಾಡಾನೆ ಗೇಟ್ ಮುರಿದು ಮತ್ತೆ ದಾಳಿ ಮಾಡಿದೆ.
ಚಂದ್ರ ಅವರ ಕಿರುಚಾಟದ ಶಬ್ಧ ಕೇಳಿ ಸಮೀಪದಲ್ಲೇ ಇದ್ದ ಬೆಳೆಗಾರ ಕುಟ್ಟಂಡ ಶ್ಯಾಂ ಸೋಮಣ್ಣ ಅವರು ತಕ್ಷಣ ಕೋವಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿದ್ದ ಕಾಡಾನೆಗೆ ಕಲ್ಲು ಬೀಸಿದರು. ಆದರೂ ಕಾಡಾನೆ ದಾಳಿ ನಿಲ್ಲಿಸದೆ ಇದ್ದಾಗ ಅವರು ಗಾಳಿಯಲ್ಲಿ ಬೆದರು ಗುಂಡು ಹಾರಿಸಿದರು. ಇದಕ್ಕೆ ಬೆದರಿದ ಕಾಡಾನೆ ಚಂದ್ರ ಅವರನ್ನು ಬಿಟ್ಟು ಕಾಫಿ ತೋಟದೊಳಗೆ ನುಸುಳಿತು.
ಕಾಡಾನೆ ಉಪಟಳದ ವಿರುದ್ಧ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.