ಲೋಕಸಭಾ ಚುನಾವಣೆಯ ಫಲಿತಾಂಶ ನಮ್ಮ ಪರವಾಗಿರಲಿದೆ : ಯದುವೀರ್ ವಿಶ್ವಾಸ
ಮಡಿಕೇರಿ: ಲೋಕಸಭಾ ಚುನಾವಣೆಯ ಫಲಿತಾಂಶ ನಮ್ಮ ಪರವಾಗಿರಲಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮೈಸೂರು ರಾಜವಂಶಸ್ಥ ಯದುವೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಪ್ರಮುಖರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ನಡೆದಿದೆ. ಎಲ್ಲರ ಮನೆಗಳಿಗೆ ಭೇಟಿ ನೀಡಿ ಬೆಂಬಲ ಕೋರಲಾಗುತ್ತಿದೆ. ರಾಜಕೀಯ ಅಧಿಕಾರದ ಮೂಲಕ ಸಾರ್ವಜನಿಕ ಸೇವೆ ಮಾಡಬೇಕೆಂಬ ಇಚ್ಛೆಯನ್ನೂ ಹೊಂದಿದ್ದೇನೆ. ಫಲಿತಾಂಶ ನಮ್ಮ ಕಡೆಗೆ ಬರುವ ವಿಶ್ವಾಸವಿದೆ ಎಂದರು.
ಬಾಲ್ಯದಿಂದಲೂ ಕೊಡಗಿನೊಂದಿಗೆ ಭಾವನಾತ್ಮಕ ಸಂಬಂಧವಿದೆ. ಕೊಡಗಿನ ನಾಗರಹೊಳೆ, ಬ್ರಹ್ಮಗಿರಿ ಸೇರಿದಂತೆ ವಿವಿಧೆಡೆಗಳಿಗೆ ಭೇಟಿ ನೀಡಿದ್ದೇನೆ. ಇಲ್ಲಿನ ಪ್ರಕೃತಿಯ ಸೊಬಗನ್ನು ಅನುಭವಿಸಿದ್ದೇನೆ ಮತ್ತು ಕಾವೇರಿ ನಾಡಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವುದಾಗಿ ತಿಳಿಸಿದರು. ಕೊಡಗಿನಲ್ಲಿ ಕಂಡು ಬರುತ್ತಿರುವ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು, ಕಾಫಿ ಬೆಳೆಗೆ ಪೂರಕ ಅಭಿವೃದ್ದಿ, ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ಇಲ್ಲಿನ ಪರಿಸರ ಸಂರಕ್ಷಣೆಯ ಜೊತೆಯಲ್ಲೇ ಅಭಿವೃದ್ಧಿಯನ್ನು ಕಾಣುವ ಅಗತ್ಯವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.