ಕುಶಾಲನಗರ| ಹಣದ ವಿಚಾರಕ್ಕೆ ಇಬ್ಬರ ಕೊಲೆ; ಆರೋಪಿಯ ಬಂಧನ
ಆರೋಪಿ ಗಿರೀಶ್
ಮಡಿಕೇರಿ: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಇಬ್ಬರನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ಕುಶಾಲನಗರದ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಮೃತಪಟ್ಟವರನ್ನು ಬಸವೇಶ್ವರ ಬಡಾವಣೆಯ ನಿವಾಸಿ ಜೋಸೆಫ್ (55) ಹಾಗೂ ಸುಂದರನಗರ ನಿವಾಸಿ ವಸಂತ (46) ಎಂದು ಗುರುತಿಸಲಾಗಿದೆ.
ಬಸವೇಶ್ವರ ಬಡಾವಣೆಯ ನಿವಾಸಿ ಆರೋಪಿ ಗಿರೀಶ್ (29)ನನ್ನು ಪೊಲೀಸರು ಬಂಧಿಸಿದ್ದಾರೆ.
ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದ ಜೋಸೆಫ್ ಹಾಗೂ ವಸಂತ ಅವರು ಮನೆಯ ಬಳಿ ಇದ್ದಾಗ ಗಿರೀಶ್ ಬಂದು ಈ ಹಿಂದೆ ಮಾಡಿದ ಕೆಲಸದ ಬಾಕಿ ಹಣ ನೀಡುವಂತೆ ಜೋಸೆಫ್ ಅವರ ಬಳಿ ಕೇಳಿದ್ದಾನೆ. ಆದರೆ, ಜೋಸೆಫ್ ಅವರು ಯಾವುದೇ ಹಣ ನೀಡಲು ಬಾಕಿ ಇರುವುದಿಲ್ಲ ಎಂದು ಹೇಳಿದ್ದರೆನ್ನಲಾಗಿದೆ.
ಈ ವೇಳೆ ಕುಪಿತಗೊಂಡ ಗಿರೀಶ್ ತನ್ನ ಮನೆಗೆ ಹೋಗಿ ಕೊಡಲಿ ತಂದು ಜೋಸೆಫ್ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ತಡೆಯಲು ಬಂದ ವಸಂತ ಅವರ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಜೋಸೆಫ್ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ವಸಂತ ಅವರು ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.