ಪೊನ್ನಂಪೇಟೆ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಗೃಹ ಸಚಿವ ಜಿ.ಪರಮೇಶ್ವರ್ ರಾಜಿನಾಮೆಗೆ ಆಗ್ರಹ
ಮಡಿಕೇರಿ : ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಬಾಡಗ ಗ್ರಾಮದ ನಲ್ಲೂರು ಎಂಬಲ್ಲಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಅಹಿಂದಾ ಒಕ್ಕೂಟ, ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನೆಡೆಯಿತು.
ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಮೆರವಣಿಗೆಯ ಮೂಲಕ ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಅಪ್ರಾಪ್ತ ಬಾಲಕಿಯ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಪಟ್ಟುಹಿಡಿದರು. ಪ್ರತಿಭಟನೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಭಟನಾಕಾರರು, ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದರೂ ಕೂಡ ಪ್ರಾಥಮಿಕ ಹಂತದಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡಿಲ್ಲ. ಹೀಗಾಗಿ ಕರ್ತವ್ಯ ಲೋಪ ಎಸಗಿದ ಪೊಲೀಸರ ವಿರುದ್ಧವು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆರೋಪಿಯ ಜೊತೆಗೆ ಅವರ ಸ್ನೇಹಿತರು ಕೂಡ ಅಪ್ರಾಪ್ತ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿದ್ದು, ಅವರ ಮೇಲೂ ಕೂಡ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಾಲಕಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯುನ್ನುದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಹಿಂದ ಒಕ್ಕೂಟಗಳ ರಾಜ್ಯ ಸಮಿತಿಯ ಸಂಚಾಲಕ ಬಿ.ಆರ್ ಭಾಸ್ಕರ್ ಪ್ರಸಾದ್ , " ಅಪ್ರಾಪ್ತೆ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಮೇಲ್ನೋಟಕ್ಕೆ ನೋಡುವಾಗ ಸಾಬೀತಾಗಿದೆ. ಅಪ್ರಾಪ್ತೆ ಹೆಣ್ಣು ಮಗಳು ದೂರ ನೀಡಲು ಹೋಗುವಾಗ ದೂರನ್ನು ನಿರಾಕರಿಸಿದ್ದಾರೆ. ಅಲ್ಲದೇ ಅತ್ಯಾಚಾರವೆಸಗಿದ ಶ್ರೀಕಾಂತ್ ಪತ್ನಿ ಅಪ್ರಾಪ್ತೆಯ ಮನೆಗೆ ಹೋಗಿ ಅಪ್ರಾಪ್ತೆ ಬಾಲಕಿಯನ್ನು ಹಲ್ಲೆ ಮಾಡಿ ಆಕೆಗೆ ಅವಮಾನ ಮಾಡಿದ್ದಾರೆ. ಈ ಕಾರಣದಿಂದ ಮನನೊಂದು ಹೆಣ್ಣುಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ" ಎಂದು ಆರೋಪಿಸಿದರು.
"ರಾಜ್ಯದಲ್ಲಿ ಜಿ ಪರಮೇಶ್ವರ್ ಅವರು ಗೃಹ ಮಂತ್ರಿಯಾದ ದಿನಗಳಿಂದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ್ಗದವರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಬಿಜೆಪಿ ಸರಕಾರದ ಅವಧಿಗಿಂತ ಹತ್ತುಪಟ್ಟು ಹೆಚ್ಚು ಇದೀಗ ಹಲ್ಲೆಗಳು ಹೆಚ್ಚಾಗಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ರಾಜೀನಾಮೆ ನೀಡಿ ಹೋಗುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು" ಎಂದು ಹೇಳಿದರು.
"ಪೊನ್ನಂಪೇಟೆ ತಾಲ್ಲೂಕು ತಹಶೀಲ್ದಾರ್ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಹೇಳುತ್ತಿರುವುದು ನಿಜಕ್ಕೂ ದುರದೃಷ್ಟಕರ. ಕೂಡಲೇ ಸ್ಥಾನಬಿಟ್ಟು ಮನೆಯಲ್ಲಿ ಕೂರುವುದು ಒಳ್ಳೆಯದು" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಅಹಿಂದ ಒಕ್ಕೂಟ ಸಂಘಟನೆಗಳ ರಾಜ್ಯ ಸಮಿತಿ ಸಂಚಾಲಕ ಚಳವಳಿ ರಾಜಣ್ಣ ಮಾತಾನಾಡಿ, "ರಾಜ್ಯದಲ್ಲಿ ನಿರಂತರವಾಗಿ ದಲಿತರ, ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಡೆಯುತ್ತಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ಕೆ.ಬಾಡಗ ಗ್ರಾಮದಲ್ಲಿ ನಡೆದ ಅಪ್ರಾಪ್ತೆ ಹೆಣ್ಣು ಮಗಳ ಮೇಲಿನ ಅತ್ಯಾಚಾರ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ಪೊನ್ನಂಪೇಟೆಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ" ಎಂದು ಅಹಿಂದ ಒಕ್ಕೂಟಗಳ ರಾಜ್ಯ ಸಮಿತಿ ಸಂಚಾಲಕ ಚಳವಳಿ ರಾಜಣ್ಣ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಭೀಮ್ ಸೇನೆಯ ಮುಖ್ಯಸ್ಥರಾಗಿರುವ ಪ್ರೊ. ಹರಿರಾಮ್ ಮಾತಾನಡಿ, "ಕೊಡಗು ಜಿಲ್ಲೆಯ ಲೈನ್ ಮನೆಗಳಲ್ಲಿ ದಲಿತರನ್ನು ಜೀತದಾಳಾಗಿ ದುಡಿಸಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ಸಾವಿರಾರು ಎಕರೆ ಸರಕಾರಿ ಭೂಮಿ ಉಳ್ಳವರ ಪಾಲಾಗಿದೆ. ಪ್ರಕರಣವನ್ನು ದಾಖಲಿಸಿಕೊಳ್ಳಲು ನಿರಾಕರಿಸಿರುವ ಪೊಲೀಸ್ ರನ್ನು ತನಿಖೆಗೊಳಪಡಿಸಿ, ಕರ್ತವ್ಯ ಲೋಪ ಎಸಗಿದವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು" ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಿರತರಾದ ನಾಯಕರುಗಳು ಅತ್ಯಾಚಾರ ಪ್ರಕರಣದಿಂದ ನೊಂದು ಆತ್ಮಹತ್ಯೆಗೆ ಶರಣಾದ ಬಾಲಕಿಯ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡುವಂತೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಶ್ರೀಕಾಂತ್‌ನನ್ನು ಬಂಧಿಸುವಂತೆ ಅಲ್ಲದೆ, ಈ ಕೃತ್ಯಕ್ಕೆ ಕುಮಕ್ಕು ನೀಡಿದ ಆರೋಪಿಯ ಪತ್ನಿ ಮತ್ತು ಆತರ ಜೊತೆಗಿದ್ದ ಸ್ನೇಹಿತರನ್ನು ಕೂಡ ಬಂಧಿಸುವಂತೆ ಒತ್ತಾಯಿಸಿ ಸುಮಾರು ಐದು ಗಂಟೆಗಳ ಕಾಲ ಪ್ರತಿಭಟನೆಯನ್ನು ನಡೆಸಿದರು.
ಜಿಲ್ಲಾ ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಗಾರರ ಮನವಿಯನ್ನು ಸ್ವೀಕರಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂಬ ಭರವಸೆ ನೀಡಿದ ಹಿನ್ನಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಇದೇ ಸಂದರ್ಭ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರುಗಳಾದ ಬೆಳ್ಳೂರು ಕೃಷ್ಣಪ್ಪ, ರಜನಿಕಾಂತ್ ಮತ್ತು ಪರಶುರಾಮ್ ಪ್ರಕರಣವನ್ನು ಸಿ.ಐ.ಡಿ ತನಿಖೆಗೆ ಆದೇಶಿಸುವಂತೆ ಮನವಿ ಪತ್ರವನ್ನು ನೀಡಿದರು.
ಅಹಿಂದ ಸಂಘಟನೆ ಒಕ್ಕೂಟದ ರಾಜ್ಯ ಸಂಚಾಲಕ ಪ್ರೊ ಹರಿರಾಮ್, ಬಿಆರ್ ಭಾಸ್ಕರ್ ಪ್ರಸಾದ್, ಕರ್ನಾಟಕ ಭೀಮ್ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ ಮಂಜುನಾಥ್, ಶಿವ, ರಾಕೇಶ್ ಸೇರಿದಂತೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಪರಶುರಾಮ್, ಕೃಷ್ಣಪ್ಪ, ರಜನಿಕಾಂತ್, ಶಿವಣ್ಣ ಕಾಟಿ ಮುರುಗಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.