ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎ.16ರಂದು ಮಡಿಕೇರಿಯಲ್ಲಿ ಪ್ರತಿಭಟನೆ

ಮಡಿಕೇರಿ, ಎ.14 : ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎ.16ರಂದು ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಸುನ್ನಿ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಸಮಿತಿಯ ಉಪಾಧ್ಯಕ್ಷ ಕೆ.ಎ.ಯಾಕೂಬ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಒಗ್ಗಟ್ಟಿನ ಹೋರಾಟ ನಡೆಸುವುದಕ್ಕಾಗಿ ಇಬ್ಬರು ಖಾಝಿಗಳ ನೇತೃತ್ವದಲ್ಲಿ ಜಿಲ್ಲಾ ಸುನ್ನಿ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಮೆರವಣಿಗೆ ಸಾಗಲಿದೆ. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸ್ವಾತಂತ್ರ್ಯ ಪೂರ್ವದಿಂದಲೇ ರಾಜರು, ಬ್ರಿಟಿಷರು ಹಾಗೂ ದಾನಿಗಳು ಮಸೀದಿಗೆ ದಾನವಾಗಿ ಜಾಗವನ್ನು ನೀಡಿದ್ದಾರೆ. ಅಂದಿನಿಂದ ಇಂದಿನವರೆಗೆ ಈ ಆಸ್ತಿಯನ್ನು ಬಳಸಿಕೊಂಡು ವಿದ್ಯಾರ್ಥಿಗಳ ಶಿಕ್ಷಣ, ಸಿಬ್ಬಂದಿಯ ವೇತನ ಮತ್ತಿತರ ಕಾರ್ಯಗಳಿಗಾಗಿ ಸದುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಸುಮಾರು 200-300 ವರ್ಷಗಳಿಂದ ಈ ಆಸ್ತಿಯನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದ್ದು, ಮಸೀದಿ, ಈದ್ಗಾ ಮೈದಾನ ಮತ್ತು ಖಬರ್ ಸ್ಥಾನಗಳ ವ್ಯವಸ್ಥೆಯಲ್ಲಿ ನಮ್ಮದೇ ತೀರ್ಮಾನಗಳು ಅಂತಿಮವಾಗುತ್ತದೆ. ಆದರೆ ಇತ್ತೀಚೆಗೆ ಕೇಂದ್ರ ಸರಕಾರ ಮಂಡಿಸಿರುವ ತಿದ್ದುಪಡಿ ಕಾಯ್ದೆ ಹಳೆಯ ನಿಯಮಗಳಿಗೆ ವ್ಯತಿರಿಕ್ತವಾಗಿದೆ. ದೇವರ ಹೆಸರಿಗೆ ದಾನವಾಗಿ ನೀಡಿದ ಆಸ್ತಿ ದೇವರ ಹೆಸರಿನಲ್ಲೇ ಇರಬೇಕೆನ್ನುವ ನಿಯಮವಿದೆ. ಕೇವಲ ರಾಜಕೀಯಕ್ಕಾಗಿ ಮತ್ತು ಹಿಂದೂ ಹಾಗೂ ಮುಸ್ಲಿಮರ ನಡುವೆ ಭೇದ ಉಂಟು ಮಾಡುವುದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಕೆ.ಎ.ಯಾಕೂಬ್ ಆರೋಪಿಸಿದರು.
ಸಮಿತಿಯ ಉಪಾಧ್ಯಕ್ಷ ಪಿ.ಎಂ.ಲತೀಫ್ ಮಾತನಾಡಿ, ಈ ಹಿಂದೆಯೂ ಮೂರು ಬಾರಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಇದು ವಕ್ಫ್ ಆಸ್ತಿಯ ಸಂರಕ್ಷಣೆಗೆ ತೆಗೆದುಕೊಂಡ ಕಠಿಣ ನಿಲುವಾಗಿತ್ತು. ಆದರೆ ಈಗಿನ ತಿದ್ದುಪಡಿ ಹಿಂದಿನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ಸಮಿತಿಯ ಮಾಧ್ಯಮ ಸಂಚಾಲಕ ಸಿ.ಎಂ.ಹಮೀದ್ ಮೌಲವಿ ಮಾತನಾಡಿ, ವಕ್ಫ್ ಕಾಯ್ದೆ ತಿದ್ದುಪಡಿಯ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ದೇಶದ ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾಗಿದೆ. ಇದರಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಲ್ಲದೆ ಆಸ್ತಿ ಕಬಳಿಸುವ ಹುನ್ನಾರವೂ ಅಡಗಿದೆ ಎಂದು ಆರೋಪಿಸಿದರು.
ಸಂವಿಧಾನವನ್ನು ಒಪ್ಪಿಕೊಳ್ಳುವ ಎಲ್ಲಾ ಭಾರತೀಯ ಮುಸಲ್ಮಾನರು ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಈ ಕಾರಣದಿಂದ ಮಡಿಕೇರಿಯಲ್ಲಿ ಕೂಡ ಬುಧವಾರ ಶಾಂತಿಯುತ ಪ್ರತಿಭಟನೆ ನಡೆಯಲಿದೆ. ಸುನ್ನಿ ಸಮನ್ವಯ ಸಮಿತಿಯ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ವಾಹನಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಮಡಿಕೇರಿಗೆ ಆಗಮಿಸಲಿದ್ದಾರೆ. ಪ್ರತಿಭಟನಾ ಮೆರವಣಿಗೆ ಸಂದರ್ಭ ಯಾವುದೇ ರಾಜಕೀಯ ಪಕ್ಷದ ಧ್ವಜವನ್ನು ಬಳಸುವಂತಿಲ್ಲ. ಸುನ್ನಿ ಸಮನ್ವಯ ಸಮಿತಿ ನೀಡುವ ಧ್ವಜವನ್ನು ಹಾಗೂ ಘೋಷಣೆಯನ್ನು ಮಾತ್ರ ಬಳಸಬೇಕು ಎಂದು ತಿಳಸಿದರು.
ಸಮಿತಿಯ ಕಾರ್ಯದರ್ಶಿ ಅಬ್ದುಲ್ ಹಫೀಝ್ ಹಾಜಿ ಮಾತನಾಡಿ, ಕೇಂದ್ರ ಸರಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಖಜಾಂಚಿ ಮುಹಮ್ಮದ್ ಹಾಜಿ ಕುಂಜಿಲ ಹಾಗೂ ಕಾರ್ಯದರ್ಶಿ ಉಮರ್ ಫೈಝಿ ಉಪಸ್ಥಿತರಿದ್ದರು.