ಕೊಡಗಿನಲ್ಲಿ ಮುಂದುವರಿದ ಮಳೆ : ರೆಡ್ ಅಲರ್ಟ್ ಘೋಷಣೆ, ಜನರಲ್ಲಿ ಆತಂಕ
ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಮತ್ತೆ ನಿರಂತರ ಮಳೆ ಮುಂದುವರಿದಿದ್ದು, ಸೋಮವಾರ ರಾತ್ರಿಯಿಂದ ಹಲವೆಡೆ ಭಾರೀ ಗಾಳಿ ಸಹಿತ ಮಳೆಯಾಗುತ್ತಿದೆ. ಮುಂದಿನ ಐದು ದಿನಗಳವರೆಗೆ ಭಾರೀ ಮಳೆಯಾಗಬಹುದೆಂದು ಹವಾಮಾನ ಇಲಾಖೆ ತಿಳಿಸಿದ್ದು, ಜು.31ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜು.31ರಂದು ಜಿಲ್ಲಾಡಳಿತ ರಜೆ ಘೋಷಿಸಿದೆ.
ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಭಾರೀ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಏರ್ಪಟ್ಟಿದ್ದು, ಶ್ರೀಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳನ್ನು ನೀರು ಆವರಿಸಿದೆ. ಕಳೆದ 24 ಗಂಟೆಗಳಲ್ಲಿ ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ದಾಖಲೆಯ 11 ಇಂಚಿಗೂ ಅಧಿಕ ಮಳೆಯಾಗಿದೆ. ಮಡಿಕೇರಿ ಮತ್ತು ನಾಪೋಕ್ಲು ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಮಳೆ ಮತ್ತಷ್ಟು ಬಿರುಸುಗೊಳ್ಳುವ ಲಕ್ಷಣಗಳು ಗೋಚರಿಸಿದ್ದು, ನದಿ ಹಾಗೂ ಬೆಟ್ಟಗುಡ್ಡ ಪ್ರದೇಶದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಕೆಲವು ಭಾಗಗಳಲ್ಲಿ ಗುಡ್ಡ ಮತ್ತು ಬರೆ ಕುಸಿದ ಘಟನೆಗಳು ನಡೆದಿದ್ದು, ಗ್ರಾಮೀಣ ಭಾಗದಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೇರಳ ರಾಜ್ಯದ ಗಡಿಭಾಗದ ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಕೇರಳದ ವಯನಾಡ್ ನಲ್ಲಿ ಜಲಸ್ಫೋಟ ಸಂಭವಿಸಿರುವುದರಿಂದ ಕೊಡಗಿನಲ್ಲೂ ಮಳೆ ಅನಾಹುತದ ಬಗ್ಗೆ ಭಯ ಮೂಡಿದೆ.
ಮಡಿಕೇರಿ ತಾಲ್ಲೂಕಿನ ಪೆರಾಜೆ ಗ್ರಾಮದ ಹೊಸಗದ್ದೆ, ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯ ಕುಂಬಾರುಕೊಪ್ಪ ಮತ್ತು ಅಯ್ಯಂಗೇರಿಯಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿದೆ. ಮಣ್ಣು ಜರಿದ ಭಾಗದಲ್ಲಿ ಧಾರಾಕಾರವಾಗಿ ನೀರು ಹರಿಯುತ್ತಿದ್ದು, ಆತಂಕ ಸೃಷ್ಟಿಸಿದೆ.
ವಿರಾಜಪೇಟೆ ಹೋಬಳಿಯ ಬೇತ್ರಿ ಕಾವೇರಿ ನದಿಯ ಹಿನ್ನೀರಿನಲ್ಲಿ ಸಿಲುಕಿದ ಆರು ಮಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಮೂಲಕ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಈ ಸಂದರ್ಭ ತಹಶೀಲ್ದಾರ್ ರಾಮಚಂದ್ರ ಹಾಗೂ ಅಧಿಕಾರಿಗಳು ಹಾಜರಿದ್ದರು.
ಪೊನ್ನಂಪೇಟೆ ತಾಲ್ಲೂಕಿನ ಕುಟ್ಟಂದಿ ಗ್ರಾಮದ ಎ.ಎಸ್.ಮಾಚಯ್ಯ ಎಂಬುವವರ ಮನೆ ಬೀಳುವ ಹಂತದಲ್ಲಿದ್ದು, ಕುಟುಂಬವನ್ನು ಸ್ಥಳಾಂತರ ಮಾಡಲಾಗಿದೆ. ಭಾಗಮಂಡಲ ಹೋಬಳಿ ತಣ್ಣಿಮಾನಿ ಗ್ರಾಮದ ಕೆ.ಪಿ.ತಮ್ಮಯ್ಯ, ಎಮ್ಮೆಮಾಡು ಗ್ರಾಮದ ಅಭಿದ್ ತಂಗಳ್ ಎಂಬವರ ಮನೆಯ ಮೇಲ್ಛಾವಣಿ ಕುಸಿದು ತೀವ್ರ ಹಾನಿಯಾಗಿದೆ.
ಬೆಟ್ಟಗೇರಿ ಪಂಚಾಯಿತಿ ಕುಂಬಾರಕೊಪ್ಪ ರಸ್ತೆ ಬದಿಯಲ್ಲಿ ಭೂಮಿ ಕುಸಿದಿದ್ದು, ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು. ಕುಶಾಲನಗರ ಹೋಬಳಿಯ ದೊಡ್ಡತ್ತೂರು ಗ್ರಾಮದ ಕೆರೆಯು ಬಿರುಕು ಬಿಟ್ಟಿದ್ದು, ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದರು. ಕೆ.ಪೆರಾಜೆ ಗ್ರಾಮ ಮಾಜಿಕೋಡಿ ಹೊಸಗದ್ದೆಯಲ್ಲಿ ಹಾಗೂ ಕೆ.ಪೆರಾಜೆ-ಆಲೆಟ್ಟಿ ರಸ್ತೆ ಬದಿಯಲ್ಲಿ ಬರೆ ಕುಸಿತ ಉಂಟಾಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಚೆಸ್ಕಾಂ ಮನವಿ :ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ವಿಪರೀತ ಗಾಳಿಯಿಂದ ಕಂಬದ ಬದಲಾವಣೆ ಪದೇ ಪದೇ ವಿದ್ಯುತ್ ಜಾಲಕ್ಕೆ ಹಾನಿ ಉಂಟಾಗುತ್ತಿರುವುದರಿMದ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮಡಿಕೇರಿ ವಿಭಾಗದ ಕಾರ್ಯನಿರ್ವಹಕ ಇಂಜಿನಿಯರ್ ಕೋರಿದ್ದಾರೆ.
ಅತಿಹೆಚ್ಚು ಮಳೆ :ಭಾಗಮಂಡಲ ಅತಿಹೆಚ್ಚು 245 ಮಿ.ಮೀ, ಸಂಪಾಜೆ 184.50, ನಾಪೋಕ್ಲು 177.80 ಮಿ.ಮೀ, ಶಾಂತಳ್ಳಿ 165, ಪೊನ್ನಂಪೇಟೆ 149, ಹುದಿಕೇರಿ 147.30, ವಿರಾಜಪೇಟೆ 142, ಶ್ರೀಮಂಗಲ 136.40, ಅಮ್ಮತ್ತಿಯಲ್ಲಿ 107.50 ಮಿ.ಮೀ ಮಳೆಯಾಗಿದೆ.