ಸಾಮಾಜಿಕ ಬದಲಾವಣೆಯಲ್ಲಿ ಕಾನೂನುಗಳಿಗಿಂತ ಧರ್ಮದ ಆದೇಶಗಳ ಪಾತ್ರ ಮಹತ್ವದ್ದು: ಡಾ.ಜೆ.ಸೋಮಣ್ಣ
ವಿರಾಜಪೇಟೆ: "ಸಮಾಜದಲ್ಲಿ ಬದಲಾವಣೆ ತರುವಲ್ಲಿ ಸರಕಾರದ ಕಾನೂನುಗಳಿಗಿಂತ ಧರ್ಮದ ಆದೇಶಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ" ಎಂದು ಹಿರಿಯ ಚಿಂತಕ, ನಿವೃತ್ತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಂದು ಜಮಾಅತೆ ಇಸ್ಲಾಮೀ ಹಿಂದ್ ವಿರಾಜಪೇಟೆ ಸ್ಥಾನೀಯ ಶಾಖೆಯ ವತಿಯಿಂದ ಸೀರತುನ್ನಬಿ ಪ್ರಯುಕ್ತ 'ಪ್ರವಾದಿ ಮುಹಮ್ಮದ್(ಸ.) ಮಹಾನ್ ಚಾರಿತ್ರ್ಯವಂತ' ಎಂಬ ವಿಷಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
'ಆಧ್ಯಾತ್ಮಿಕತೆಯ ಮೂಲಕ ಲೌಕಿಕ ಬದುಕನ್ನು ಸಂಸ್ಕರಿಸುವ ವಿಧಾನವನ್ನು ಪ್ರವಾದಿ ಮುಹಮ್ಮದ್(ಸ.)ರವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಇತರ ಹಲವು ಧಾರ್ಮಿಕ ಸುಧಾರಕರುಗಳಿಗೆ ಹೋಲಿಸಿದಲ್ಲಿ ಅವರು ಓರ್ವ ಸಂಸಾರಸ್ಥರಾಗಿದ್ದುಕೊಂಡೇ ಸಮಾಜಕ್ಕೆ ಮಾದರಿ ಯೋಗ್ಯ ಶಿಕ್ಷಣ ನೀಡಿದರು. ಪ್ರವಾದಿಯ ಬದುಕು ತೆರೆದಿಟ್ಟ ಪುಸ್ತಕವಾಗಿತ್ತು. ಮಾತ್ರವಲ್ಲ, ಅವರ ಬದುಕಿನ ಎಲ್ಲಾ ಮಜಲುಗಳೂ ಇಂದು ದಾಖಲಿಸಲ್ಪಟ್ಟಿರುವುದು ವಿಶೇಷವಾಗಿದೆ' ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಜೊತೆ ಕಾರ್ಯದರ್ಶಿ ರಿಯಾಝ್ ಅಹ್ಮದ್ ಮಾತನಾಡಿ, 'ಧರ್ಮಗಳ ಮಧ್ಯೆ ಇರುವ ನಿಗೂಢತೆಗಳು ಹೋಗಲಾಡಿಸಬೇಕಾಗಿದೆ. ವಿವಿಧ ಧರ್ಮಗಳ ಮಧ್ಯೆ ಸಮಾಜದಲ್ಲಿ ಸೌಹಾರ್ದ ಸಂವಾದಗಳು ಹೆಚ್ಚಾಗಿ ನಡೆಸುವುದರಿಂದ ಪರಸ್ಪರ ಅರಿವಿನ ವಾತಾವರಣ ನಿರ್ಮಾಣಗೊಳ್ಳುತ್ತದೆ. ಇಂದು ಸಮಾಜವೂ ಎದುರಿಸುತ್ತಿರುವ ದ್ವೇಷ, ಹಗೆತನ, ಕೋಮುವಾದಗಳೆಂಬ ರೋಗಗಳಿಗೆ ಇದುವೇ ಪರಿಹಾರ. ಪ್ರವಾದಿ ಮುಹಮ್ಮದ್(ಸ.)ರನ್ನು ಮುಸ್ಲಿಮ್ ಸಮಾಜವೂ ಸೇರಿದಂತೆ ಒಟ್ಟು ಸಮಾಜವು ಹೇಗೆ ಅರಿಯಬೇಕೋ ಹಾಗೇ ಅರಿತಿಲ್ಲ ಎಂಬುದು ವಿಷಾದನೀಯ. ವಿಶ್ವಾಸ ಮತ್ತು ವಿಜ್ಞಾನ ಅಭಿವೃದ್ಧಿಯ ಮಂತ್ರಗಳೆಂದು ಕಲಿಸಿದರವರು ಪ್ರವಾದಿ ಮುಹಮ್ಮದ್(ಸ)' ಎಂದರು.
ತಿತಿಮತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪಿ.ರಾಜೇಶ್ ಪದ್ಮನಾಭ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸ್ಥಾನೀಯ ಅಧ್ಯಕ್ಷ ಅಬ್ದುರ್ರಹ್ಮಾನ್ ಪಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಲುಕ್ಮಾನ್ ಕಿರಾಅತ್ ಪಠಿಸಿದರು. ಕೆ.ಟಿ.ಬಶೀರ್ ವಂದಿಸಿದರು.