ಸಂಪಾಜೆ | ಬಿಜೆಪಿ ಮುಖಂಡನ ಹತ್ಯೆ ಪ್ರಕರಣ : ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಮಡಿಕೇರಿ : ಸಂಪಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಬಿಜೆಪಿಯ ಮುಖಂಡ, ಸಂಪಾಜೆ ನಿವಾಸಿ ಬಾಲಚಂದ್ರ ಕಳಗಿ ಅವರ ಹತ್ಯೆ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯ ಇಬ್ಬರಿಗೆ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಲ್ಲುಗುಂಡಿ ನಿವಾಸಿ ಹರಿಪ್ರಸಾದ್ ಹಾಗೂ ಲಾರಿ ಚಾಲಕ ಮಡಿಕೇರಿಯ ಜಯನ್ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಕೊಡಗು ಜಿಲ್ಲಾ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅ.16ರಂದು ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣವನ್ನು ಇಂದು ಪ್ರಕಟಿಸಿದೆ.
ದಂಡದ ಮೊತ್ತವನ್ನು ಮೃತ ಬಾಲಚಂದ್ರ ಕಳಗಿ ಅವರ ಪತ್ನಿಗೆ ನೀಡುವಂತೆ ಆದೇಶಿಸಿದೆ. ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕ ದೇವೇಂದ್ರಪ್ಪ ವಾದ ಮಂಡಿಸಿದ್ದರು.
2019 ಮಾರ್ಚ್ 19ರಂದು ಓಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಚಂದ್ರ ಕಳಗಿ ಅವರನ್ನು ಮೇಡಿಕೇರಿ-ತಾಳತ್‍ಮನೆ ಬೈಪಾಸ್ ರಸ್ತೆಯಲ್ಲಿ ಲಾರಿಯಿಂದ ಢಿಕ್ಕಿ ಹೊಡೆಸಿ ಹತ್ಯೆ ಮಾಡಲಾಗಿತ್ತು. ಮೇಲ್ನೋಟಕ್ಕೆ ಅಪಘಾತ ಪ್ರಕರಣ ಎಂದು ಕಂಡು ಬಂದಿತ್ತಾದರೂ, ತನಿಖೆ ನಡೆಸಿದ ಪೊಲೀಸರು ಇದೊಂದು ವ್ಯವಸ್ಥಿತ ಕೊಲೆ ಎಂದು ಸತ್ಯವನ್ನು ಬೇಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಸಂಪಾಜೆ ಕಲ್ಲುಗುಂಡಿ ನಿವಾಸಿಗಳಾದ ಸಂಪತ್ ಕುಮಾರ್, ಹರಿಪ್ರಸಾದ್ ಮತ್ತು ಲಾರಿ ಚಾಲಕ ಮಡಿಕೇರಿಯ ಜಯನ್ ಎಂಬವರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದರು. ಜಾಮೀನಿನಲ್ಲಿ ಹೊರಗೆ ಬಂದಿದ್ದ ಆರೋಪಿಗಳಲ್ಲಿ ಒಬ್ಬನಾದ ಸಂಪತ್ ಕುಮಾರ್(35) ಎಂಬಾತನನ್ನು ಸುಳ್ಯದ ಶಾಂತಿನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.