ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಗ್ಗೆ ವಿವಾದಿತ ಪೋಸ್ಟ್ | ಹಿರಿಯ ವಕೀಲ, ಲೇಖಕ ವಿದ್ಯಾಧರ ಬಡ್ಡಡ್ಕ ಬಂಧನ
ವಕೀಲ, ಲೇಖಕ ವಿದ್ಯಾಧರ ಬಡ್ಡಡ್ಕ
ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿವಾದಿತ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಹಿರಿಯ ಲೇಖಕ, ವಕೀಲ ವಿದ್ಯಾಧರ ಬಡ್ಡಡ್ಕ ಅವರನ್ನು ಸುಂಟಿಕೊಪ್ಪ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ವಿವಾದಿತ ಪೋಸ್ಟ್ ನಲ್ಲಿ “ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಬ್ರಿಟಿಷರ ಬೂಟು ನೆಕ್ಕಿದವರು” ಎಂದು ಶ್ರೀವತ್ಸ ಭಟ್ ಎಂಬವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆಯಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಧರ ಬಡ್ಡಡ್ಕ ಅವರನ್ನು ವಿಚಾರಣೆ ನಡೆಸಿ ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ವಿದ್ಯಾಧರ್ ಅವರ ಕೃತಿ ʼಅಮರಸುಳ್ಯ-1837 ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟʼ ಭಾರೀ ಚರ್ಚೆಗೆ ಕಾರಣವಾಗಿತ್ತು.
ಪೋಸ್ಟ್ಗೆ ಖಂಡನೆ :
ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಒತ್ತಾಯಿಸಿದ್ದರು.
ಶ್ರೀವತ್ಸ ಭಟ್ ಎಂಬ ಹೆಸರಿನ ಖಾತೆ ಮೂಲಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಮಾನಿಸಲಾಗಿದೆ. ಇದು ಕೊಡಗು ಮಾತ್ರವಲ್ಲದೆ ಇಡೀ ದೇಶದ ಜನರಿಗೆ ನೋವನ್ನುಂಟು ಮಾಡಿದೆ. ಭಾರತೀಯ ಸೇನೆಯ ಬಗ್ಗೆ ಗೌರವವಿಲ್ಲದ ವ್ಯಕ್ತಿ, ವೀರ ಸೇನಾನಿಗಳ ಬಗ್ಗೆ ಕೇವಲವಾಗಿ ಪ್ರತಿಕ್ರಿಯೆ ನೀಡಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ತಿಳಿಸಿದ್ದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಈ ದೇಶ ಕಂಡ ಅಪ್ರತಿಮ ಸೇನಾನಿಗಳಾಗಿದ್ದಾರೆ. ಇವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಶ್ರೀವತ್ಸ ಭಟ್ ಎಂಬ ಹೆಸರಿನ ಖಾತೆ ಮೂಲಕ ಕಿಡಿಗೇಡಿಯೊಬ್ಬ ವೀರ ಸೇನಾನಿಗಳನ್ನು ಅವಮಾನಿಸಿದ್ದು, ಈತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದರು.
ಸೇನಾನಿಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ಪೋಸ್ಟ್ ಮಾಡಿರುವುದಲ್ಲದೆ ಕೊಡವರ ಬಗ್ಗೆಯೂ ಅಗೌರವದ ಮಾತುಗಳನ್ನಾಡಿದ್ದಾನೆ. ಭಾರತೀಯ ಸೇನೆಗೆ ಮತ್ತು ದೇಶಕ್ಕೆ ತಮ್ಮ ಶೂರತ್ವದ ಮೂಲಕವೇ ಅಪಾರ ಕೊಡುಗೆಯನ್ನು ನೀಡಿರುವ ವೀರರ ನಾಡು ಕೊಡಗಿನ ಕಣ್ಮಣಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅವಹೇಳನ ಮಾಡಿರುವ ದೇಶದ್ರೋಹಿಯನ್ನು ಪೊಲೀಸರು ತಕ್ಷಣ ಬಂಧಿಸಬೇಕು ಮತ್ತು ಸೂಕ್ತ ತನಿಖೆ ನಡೆಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹಂಚೆಟ್ಟಿರ ಮನು ಮುದ್ದಪ್ಪ ಆಗ್ರಹಿಸಿದ್ದರು.