ಸುಂಟಿಕೊಪ್ಪ | ಮೃತದೇಹ ಸುಟ್ಟ ಪ್ರಕರಣ : ಪತ್ನಿ ಸೇರಿ ಮೂವರ ಬಂಧನ
ಮಡಿಕೇರಿ : ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ತೋಟವೊಂದರಲ್ಲಿ ಅ.8 ರಂದು ಪತ್ತೆಯಾದ ಅರೆಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪದಡಿ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.
ಅತ್ಯಂತ ಸೂಕ್ಷ್ಮ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಮೂಲತಃ ತೆಲಂಗಾಣ ರಾಜ್ಯದ ಯಾದಾದ್ರಿ ಜಿಲ್ಲೆಯ ಮೋಂಗಿರ್ ನಗರದ, ಪ್ರಸ್ತುತ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಿರುವ ನಿಹಾರಿಕ ಪಿ. (29), ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ವಾಸವಿ ನಗರದ ಪ್ರಸ್ತುತ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಿರುವ ನಿಖಿಲ್ ಮೈರೆಡ್ಡಿ (28) ಹಾಗೂ ಹರಿಯಾಣ ರಾಜ್ಯದ ಕಾರ್ನಲ್ ಗರುಂದ ನಿವಾಸಿ ಅಂಕೂರ್ ರಾಣ(30) ನನ್ನು ಬಂಧಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ಅರೆಸುಟ್ಟ ಮೃತದೇಹ ನಿಹಾರಿಕಳ ಪತಿ ರಮೇಶ್ ಕುಮಾರ್ (54) ಎಂಬುವವರದ್ದಾಗಿದೆ ಎಂದರು.
500 ಸಿಸಿ ಕ್ಯಾಮರಾ ಪರಿಶೀಲನೆ :
ಕಾಫಿ ತೋಟದಲ್ಲಿ ಅರೆಸುಟ್ಟ ಮೃತದೇಹದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಯನ್ನು ಕೈಗೊಂಡು ಆರೋಪಿಗಳ ಪತ್ತೆಗಾಗಿ ಸುಮಾರು 500 ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ.
ಕೃತ್ಯಕ್ಕೆ ಬಳಸಿರಬಹುದಾದ ಸಂಶಯಾಸ್ಪದ ಕಾರಿನ ಮಾಹಿತಿಯನ್ನು ಕಲೆ ಹಾಕಿದಾಗ ಇದು ರಮೇಶ್ ಕುಮಾರ್ ಹೈದರಾಬಾದ್ ಎಂಬುವವರದ್ದಾಗಿದೆ ಎಂದು ತಿಳಿದುಬಂದಿದೆ. ಇದನ್ನು ಆಧರಿಸಿ ತನಿಖೆಯನ್ನು ತೀವ್ರಗೊಳಿಸಿದಾಗ ನಿಹಾರಿಕ ರಮೇಶ್ ಕುಮಾರ್ ಅವರ ಎರಡನೇ ಪತ್ನಿ ಎನ್ನುವುದು ಖಾತ್ರಿಯಾಗಿದೆ.
ಆಸ್ತಿ ಮಾರಾಟದಿಂದ ಬಂದ 8ಕೋಟಿ ರೂ.ಗಳನ್ನು ಪಡೆಯುವ ಉದ್ದೇಶದಿಂದ ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ ನಿಹಾರಿಕಾ ತನ್ನ ಸ್ನೇಹಿತ ಹರಿಯಾಣ ಮೂಲದ ಅಂಕೂರ್ ರಾಣನ ಸಹಾಯ ಪಡೆದಿದ್ದಾಳೆ. ಡ್ರಾಪ್ ಮಾಡುವ ನೆಪದಲ್ಲಿ ಪತಿ ರಮೇಶ್ ಕುಮಾರ್ ನ ಕಾರಿನಲ್ಲಿ ಬಂದ ಇಬ್ಬರು ಉಪ್ಪಳ್-ಭುವನಗಿರಿ ನಡುವಿನ ಹೆದ್ದಾರಿಯ ಬಳಿ ಕಾರನ್ನು ಬದಿಗೆ ನಿಲ್ಲಿಸಿದ್ದಾರೆ. ನಂತರ ಇಬ್ಬರು ಸೇರಿ ರಮೇಶ್ ಕುಮಾರ್ ನನ್ನು ಕೊಲೆ ಮಾಡಿದ್ದಾರೆ. ನಂತರ ಬೆಂಗಳೂರಿನ ಹೊರಮಾವು ಎಂಬಲ್ಲಿಗೆ ಬರುವ ನಿಹಾರಿಕಾ ತನ್ನ ಮತ್ತೊಬ್ಬ ಸ್ನೇಹಿತ ನಿಖಿಲ್ ಬಳಿ ಕೊಲೆಯ ವಿಚಾರ ತಿಳಿಸುತ್ತಾಳೆ. ಶವವನ್ನು ಯಾರಿಗೂ ಸಿಗದಂತೆ ನಾಶ ಮಾಡುವ ಉದ್ದೇಶದಿಂದ ಸುಂಟಿಕೊಪ್ಪ ಬಳಿಯ ತೋಟಕ್ಕೆ ತಂದು ಬೆಂಕಿ ಹಚ್ಚಿ ಆರೋಪಿಗಳು ಕಾರಿನಲ್ಲಿ ಮರಳಿದ್ದಾರೆ. ಈ ಘಟನೆ ಇದೇ ಅ.3 ರಂದು ನಡೆದಿದೆ ಎಂದು ಎಸ್‍ಪಿ ಕೆ.ರಾಮರಾಜನ್ ವಿವರಿಸಿದರು.
ಸತತ 10 ದಿನಗಳ ತನಿಖೆಯ ನಂತರ ಮೊದಲಿಗೆ ನಿಹಾರಿಕ ಹಾಗೂ ನಿಖಿಲ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು. ನಂತರ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಅಂಕೂರ್ ರಾಣನನ್ನು ಹರಿದ್ವಾರದಲ್ಲಿ ಬಂಧಿಸಲಾಯಿತು ಎಂದು ತಿಳಿಸಿದರು.
ಎಸ್‍ಪಿ ಕೆ.ರಾಮರಾಜನ್, ಹೆಚ್ಚುವರಿ ಎಸ್‍ಪಿ ಸುಂದರ್ ರಾಜ್.ಕೆ.ಎಸ್ ಹಾಗೂ ಸೋಮವಾರಪೇಟೆ ಉಪವಿಭಾಗದ ಡಿವೈಎಸ್‍ಪಿ ಗಂಗಾಧರಪ್ಪ ಆರ್.ಎ. ಅವರ ಮಾರ್ಗದರ್ಶನದಲ್ಲಿ 16 ಪೊಲೀಸ್ ಅಧಿಕಾರಿಗಳ ಒಟ್ಟು 4 ವಿಶೇಷ ತನಿಖಾ ತಂಡ ತನಿಖೆ ನಡೆಸಿ ಸವಾಲಿನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.