ದ.ಕ., ಕೊಡಗು ಗಡಿಯಲ್ಲಿ ನಕ್ಸಲರ ಸಂಚಾರದ ಶಂಕೆ: ಪೊಲೀಸ್ ಕಟ್ಟೆಚ್ಚರ
ಮಡಿಕೇರಿ, ಮಾ.18: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ನಕ್ಸಲರು ಸಂಚರಿಸಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಾಲ್ವರಿಂದ ಐವರು ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕೂಜಿಮಲೆ ಕಡಮಕಲ್ಲು ಭಾಗದ ಅಂಗಡಿಯೊಂದರಿಂದ ತಂಡವೊಂದು ದಿನಸಿ ಸಾಮಗ್ರಿ ಖರೀದಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ತಂಡವು ನಮ್ಮನ್ನು ಅರಣ್ಯ ಸಿಬ್ಬಂದಿ ಕಳುಹಿಸಿದ್ದಾರೆ ಎಂದು ಅಂಗಡಿಯವನ ಬಳಿ ಹೇಳಿಕೊಂಡಿದ್ದಾರೆ. ದಿನಸಿ ಪಡೆದು ಮರಳಿದ ನಂತರ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಅಂಗಡಿಯವನು ನಡೆದ ವಿಚಾರ ತಿಳಿಸಿದಾಗ ಅರಣ್ಯ ಸಿಬ್ಬಂದಿ ನಾವು ಯಾರನ್ನೂ ಕಳುಹಿಸಿಲ್ಲವೆಂದು ಹೇಳಿದ್ದಾರೆ.
ಈ ಪ್ರಕರಣ ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ನಕ್ಸಲರ ಸಂಚಾರದ ಕುರಿತು ಶಂಕೆ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಕೂಂಬಿಂಗ್ ಆರಂಭ: ಶಂಕಿತ ನಕ್ಸಲ್ ಪ್ರತ್ಯಕ್ಷದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಾರ್ಕಳದಿಂದ ನಕ್ಸಲ್ ನಿಗ್ರಹ ದಳ (ಎಎನ್ಎಫ್) ಆಗಮಿಸಿದ್ದು, ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ.
ಎಎನ್ಎಫ್ ತಂಡ ಕೂಜಿಮಲೆ ಸಮೀಪದ ಮೂರು ಕಡೆಗಳಾದ ಬಾಳುಗೋಡಿನ ಉಪ್ಪುಕಳ, ಕೂಜಿಮಲೆ, ಕಡಮಕಲ್ಲು ಪ್ರದೇಶದಿಂದ ಕೂಂಬಿಂಗ್ ಆರಂಭಿಸಿದೆ.
2012ರಲ್ಲಿ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದಲ್ಲಿ ಮತ್ತು 2018ರಲ್ಲಿ ಸಂಪಾಜೆಯ ಗುಡ್ಡೆಗದ್ದೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಇದೀಗ ಕೂಜಿಮಲೆ ಕಡಮಕಲ್ಲು ಭಾಗದಲ್ಲಿ ನಕ್ಸಲ್ ಸಂಚಾರದ ಶಂಕೆ ವ್ಯಕ್ತವಾಗಿದ್ದು, ಲೋಕಸಭಾ ಚುನಾವಣೆಯ ಹಿನ್ನೆಲೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಕೂಜಿಮಲೆ ಕಡಮಕಲ್ಲು ಬೆಟ್ಟ ಪ್ರದೇಶದಿಂದ ಕೂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರದೇಶ ವ್ಯಾಪಿಸಿದೆ.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.