ಮೋದಿ, ಶಾ ಎದುರು ನಿಲ್ಲಲಾಗದವರು ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ : ಸಚಿವ ಬೋಸರಾಜು
ಮಡಿಕೇರಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಎದುರು ನಿಂತು ಕರ್ನಾಟಕ ರಾಜ್ಯಕ್ಕೆ ಏನು ಬೇಕು ಎಂದು ಕೇಳಲಾಗದ ಬಿಜೆಪಿ ಮಂದಿ, ಜನರ ಹಾದಿ ತಪ್ಪಿಸುವುದಕ್ಕಾಗಿ ಧರ್ಮದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಆರೋಪಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವುದಕ್ಕೂ, ಗಲಭೆ ಸಂಬಂಧ ಹಳೆಯ ಪ್ರಕರಣಗಳ ಕುರಿತು ರಾಜ್ಯದಲ್ಲಿ ವಿಚಾರಣೆ ನಡೆಯುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಈಗಾಗಲೇ ಗೃಹ ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ, ಕಾನೂನು ರೀತಿಯ ಕ್ರಮಗಳು ನಡೆಯುತ್ತಿದೆ ಅಷ್ಟೇ ಎಂದರು.
ದೇಶದ ಇತಿಹಾಸದಲ್ಲೇ ಕಾಂಗ್ರೆಸ್ ಸರಕಾರರ ದ್ವೇಷ ರಾಜಕಾರಣ ಮಾಡಿಲ್ಲ. ವಿರೋಧ ಪಕ್ಷದಲ್ಲಿದ್ದ ವಾಜಪೇಯಿ, ಅಡ್ವಾಣಿ ಅವರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದೆ. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್ ಶಾ ಸಿಬಿಐ, ಈಡಿ, ಚುನಾವಣಾಧಿಕಾರಿಗಳನ್ನು ಬಳಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇವರ ಎದುರು ನಿಲ್ಲಲು ಧೈರ್ಯವಿಲ್ಲದ ಸಂಸದರು ಇಲ್ಲಸಲ್ಲದ ವಿಚಾರಣಗಳನ್ನು ಎಳೆದು ತಂದು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಜಿಎಸ್‍ಟಿ ಪಾಲಿನ ಹಣ ನೀಡಿಲ್ಲ. ಉದ್ಯೋಗ ಖಾತ್ರಿಯ ಕಾರ್ಮಿಕರ ಹಣವನ್ನು ಬಿಡುಗಡೆ ಮಾಡಿಲ್ಲ. ಬರ ಪರಿಹಾರವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದರೂ ಇದನ್ನೆಲ್ಲ ಕೇಳುವ ಧೈರ್ಯ ಅವರಿಗಿಲ್ಲ. ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಕೇಂದ್ರ ಸರ್ಕಾರದ ಬಳಿ ತೆರಳಿ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರೂ ಇಲ್ಲಿಯವರೆಗೆ ಹಣ ನೀಡಿಲ್ಲವೆಂದು ಬೋಸರಾಜು ಟೀಕಿಸಿದರು.
ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉಪಸ್ಥಿತರಿದ್ದರು.