ಭಕ್ತರ ಹರ್ಷೋದ್ಘಾರದ ನಡುವೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ : ಸಾವಿರಾರು ಭಕ್ತರು ಭಾಗಿ
ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಗುರುವಾರ ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವವಾಯಿತು.
ಸಂಪ್ರದಾಯದಂತೆ ತಾಯಿ ಕಾವೇರಿ ಮಾತೆಗೆ ಪೂಜಾ ವಿಧಿವಿಧಾನಗಳು ನಡೆದವು. ಪವಿತ್ರ ತೀರ್ಥೋದ್ಭವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಡಿವೈಎಸ್ಪಿ ಮಹೇಶ್ ಕುಮಾರ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯದ ಇಒ ಎನ್.ಜಿ.ಚಂದ್ರಶೇಖರ್, ಭಾಗಮಂಡಲ ಭಗಂಡೇಶ್ವರ ದೇವಾಲಯದ ತಕ್ಕಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಭಾಗಮಂಡಲ ಗ್ರಾ.ಪಂ.ಅಧ್ಯಕ್ಷರಾದ ಕಾಳನ ರವಿ,, ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ ಇತರರು ಇದ್ದರು.
ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗದಿAದ ಅನ್ನದಾನವು ವ್ಯವಸ್ಥಿತವಾಗಿ ನಡೆಯಿತು. ಹಾಗೆಯೇ ಚೆಟ್ಟಿನಾಡು ವಾಲ್ನೂರು ಎಸ್ಟೇಟ್ನ ಅಣ್ಣಾಮಲೈ ಚೆಟ್ಟಿಯಾನ್ ಅವರಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ ಈ ಬಾರಿ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲರಲ್ಲಿ ಸಮೃದ್ಧಿ ಹಾಗೂ ಸಂತಸ ತಂದಿದೆ. ತಾಯಿ ಕಾವೇರಿ ಮಾತೆ ಸದಾಕಾಲ ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ನಾಡಿನ ಸಮಸ್ತ ಜನರಿಗೆ ಶಾಂತಿ, ನೆಮ್ಮದಿ ತರುವಂತಾಗಲಿ ಎಂದು ಪ್ರಾರ್ಥಿಸಿದರು.
ಶಾಸಕ ಡಾ.ಮಂತರ್ಗೌಡ ಮಾತನಾಡಿ, ತಾಯಿ ಕಾವೇರಿ ಮಾತೆ ಎಲ್ಲರಿಗೂ ಒಳಿತು ಮಾಡಲಿ. ಕಾವೇರಿ ನದಿ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರನ್ನು ಒಳಗೊಂಡAತೆ ಭಕ್ತರು ಭಾಗಮಂಡಲದಿAದ ತಲಕಾವೇರಿ ವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ತಾಯಿ ಕಾವೇರಿ ಮಾತೆಗೆ ನಮಿಸಿದ್ದು ವಿಶೇಷವಾಗಿತ್ತು.
ತೀರ್ಥೋದ್ಭವದ ಪೂಜಾ ವಿಧಿವಿಧಾನಗಳನ್ನು ಅರ್ಚಕರಾದ ಪ್ರಶಾಂತ್ ಆಚಾರ್, ಗುರುರಾಜ್, ರವಿರಾಜ್, ವಿಠಲ ಆಚಾರ್, ಸುದೀರ್ ಆಚಾರ್ ನೆರವೇರಿಸಿದರು.
ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ಕಸಾಪ ಜಿಲ್ಲಾ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರ ನೇತೃತ್ವದಲ್ಲಿ `ಭಕ್ತಿಗೀತೆ ಗಾಯನ' ಕಾರ್ಯಕ್ರಮವು ನಡೆಯಿತು. ಎಂ.ಬಿ.ದೇವಯ್ಯ ಅವರ ನೇತೃತ್ವದ ತಂಡದವರು ದುಡಿ ನುಡಿಸಿದರು.
ಕಿರು ಸಂಕ್ರಮಣ ಹಿನ್ನೆಲೆ ಮುಂದಿನ ಒಂದು ತಿಂಗಳ ಕಾಲ ತಲಕಾವೇರಿಗೆ ಭಕ್ತರು ಭೇಟಿ ನೀಡಿ ತೀರ್ಥ ಪಡೆಯುವುದು ವಿಶೇಷವಾಗಿದೆ.