ಮಡಿಕೇರಿ: ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟ ಆನೆಯೊಂದು ಬೆಳ್ಳಂಬೆಳಗ್ಗೆ ಮಂಜು ಮುಸುಕಿದ ವಾತಾವರಣದಲ್ಲಿ ನಡುರಸ್ತೆಯಲ್ಲಿ ಸಂಚರಿಸುವ ಮೂಲಕ ಜನರಲ್ಲಿ ಆತಂಕವನ್ನು ಮೂಡಿಸಿದ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ.
ಶನಿವಾರ ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಮಂಜು ಮುಸುಕಿದ ವಾತಾವರಣದಲ್ಲಿ ಗದ್ದೆಯೊಂದರ ಮೂಲಕ ಕಾಡಾನೆ ಪಟ್ಟಣ ಪ್ರವೇಶ ಮಾಡಿತು. ಪೊನ್ನಂಪೇಟೆ ನ್ಯಾಯಾಲಯದ ಸಮೀಪ ಪ್ರತ್ಯಕ್ಷವಾದ ಗಜರಾಜ ರಾಜಾರೋಷವಾಗಿ ರಸ್ತೆಯಲ್ಲಿ ಹೆಜ್ಜೆ ಹಾಕಿತು. ಆಗಷ್ಟೇ ಅಂಗಡಿಗಳನ್ನು ತೆರೆಯುತ್ತಿದ್ದ ವರ್ತಕರು, ರಸ್ತೆಯಲ್ಲಿ ಬರುತ್ತಿದ್ದ ವಾಹನ ಚಾಲಕರು ಹಾಗೂ ಸ್ಥಳೀಯರು ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡಾನೆಯನ್ನು ಕಂಡು ಆತಂಕಗೊಂಡರು.
ಕಾಡಾನೆ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‍ಗಳಲ್ಲಿ ಸೆರೆ ಹಿಡಿದರು. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಥಳಕ್ಕಾಗಮಿಸಿದ ಪೊನ್ನಂಪೇಟೆಯ ವಲಯ ಅರಣ್ಯಾಧಿಕಾರಿ ಬಿ.ಎಂ.ಶಂಕರ್, ಎ.ಸಿ.ಎಫ್. ಗೋಪಾಲ್, ಡಿ.ಆರ್.ಎಫ್.ಓ ಗಣೇಶ್, ರವಿ ಕಿರಣ್, ರಕ್ಷಿತ್, ತಿತಿಮತಿ ವಿಭಾಗದ ಎಲಿಫೆಂಟ್ ಟಾಸ್ಕ್ ಫೋರ್ಸ್ ಹಾಗೂ ಆರ್ ಆರ್ಟಿ ಸಿಬ್ಬಂದಿಗಳು ಕಾಡಾನೆಯನ್ನು ಹಿಂಬಾಲಿಸಿದರು.
ಕಿರುಗೂರು ಗ್ರಾಮದ ಕುಟ್ಟಿಚಾತ ದೇವರ ಕಾಡಿನಲ್ಲಿ ಗಜರಾಜ ನುಸುಳಿಕೊಂಡಿರುವುದಾಗಿ ತಿಳಿದು ಬಂದಿದೆ. ಪಟ್ಟಣದಲ್ಲಿ ಪ್ರತ್ಯಕ್ಷವಾಗಿ ಭೀತಿ ಮೂಡಿಸಿದ್ದ ಕಾಡಾನೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಮುಂದಾಗಿದೆ.