ಮುರುಡೇಶ್ವರದಲ್ಲಿ ಕೋಲಾರದ ವಿದ್ಯಾರ್ಥಿನಿಯರು ಸಮುದ್ರಪಾಲು: ವಸತಿ ಶಾಲೆಯ ಪ್ರಾಂಶುಪಾಲೆ ಅಮಾನತು, ಅತಿಥಿ ಶಿಕ್ಷಕರ ವಜಾ
ಮೃತರ ಕುಟುಂಬಗಳಿಗೆ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ 5 ಲಕ್ಷ ರೂ ಪರಿಹಾರ ಘೋಷಣೆ
ಸಮುದ್ರಪಾಲಾಗಿ ಮೃತಪಟ್ಟ ವಿದ್ಯಾರ್ಥಿನಿಯರು
ಕೋಲಾರ, ಡಿ.11: ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದ ವೇಳೆ ಮುಳಬಾಗಿಲು ತಾಲೂಕು ಎಂ.ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ ಹಾಗೂ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಪ್ರವಾಸದ ವೇಳೆ ಬೇಜವಾಬ್ದಾರಿ ತನ ನಿರ್ಲ್ಯಕ್ಷ ವಹಿಸಿದ ಆರೋಪದಲ್ಲಿ ವಸತಿ ಶಾಲೆಯ ಪ್ರಾಂಶುಪಾಲೆ ಶಶಿಕಲಾ ಅವರನ್ನು ಅಮಾನತು ಹಾಗೂ ಆರು ಅತಿಥಿ ಉಪನ್ಯಾಕರು ಮತ್ತು ಡಿ ಗ್ರೂಪ್ ಸಿಬ್ಬಂದಿಯನ್ನ ಕೆಲಸದಿಂದ ವಜಾ ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಕಾಂತರಾಜು ಆದೇಶಿಸಿದ್ದಾರೆ.
ಮೃತರ ಕುಟುಂಬಗಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ (ಕ್ರೈಸ್) ಐದು ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
ಮುಳಬಾಗಲು ತಾಲೂಕಿನ ಪೂಜಾರಹಳ್ಳಿಯ ಶ್ರಾವಂತಿ, ಗಡ್ಡೂರು ಗ್ರಾಮದ ದೀಕ್ಷಾ, ಹೆಬ್ಬಣಿ ಗ್ರಾಮದ ಲಾವಣ್ಯಾ ಹಾಗೂ ದೊಡ್ಡಘಟ್ಟ ಗ್ರಾಮದ ವಂದನಾ ಮೃತಪಟ್ಟ ವಿದ್ಯಾರ್ಥಿನಿಯರಾಗಿದ್ದಾರೆ. ಸಮುದ್ರಪಾಲಾಗಿದ್ದ ವೇಳೆ ರಕ್ಷಿಸಲ್ಪಟ್ಟಿರುವ ಯಶೋಧ, ಲಿಪಿಕಾ ಮತ್ತು ವೀಕ್ಷಣಾ ಎಂಬ ಮೂವರು ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಳಬಾಗಿಲು ತಾಲೂಕು ಎಂ.ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಒಂಭತ್ತನೇ ತರಗತಿಯ 46 ವಿದ್ಯಾರ್ಥಿಗಳು ಪ್ರಾಂಶುಪಾಲರ ನೇತೃತ್ವದಲ್ಲಿ ಬನವಾಸಿ, ಶಿರಸಿ, ಗೋಕರ್ಣ, ಇಡಗುಂಜಿ, ಜೋಗ್ ಫಾಲ್ಸ್ ಮತ್ತು ಮುರುಡೇಶ್ವರಕ್ಕೆ ತೆರಳಿದ್ದರು. ಭಟ್ಕಳ ತಾಲೂಕಿನ ಮುರಡೇಶ್ವರದ ಅರಬ್ಬಿ ಸಮುದ್ರದಲ್ಲಿ ಆಟವಾಡಲು ನೀರಿಗೆ ಇಳಿದಿದ್ದ ವೇಳೆ ಏಳು ಜನ ವಿದ್ಯಾರ್ಥಿನಿಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಮೂವರು ಸ್ಥಳದಲ್ಲಿದ್ದವರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸಮುದ್ರಪಾಲಾದ ಓರ್ವ ವಿದ್ಯಾರ್ಥಿನಿಯ ಮೃತದೇಹ ಮಂಗಳವಾರವೇ ಸಿಕ್ಕಿದ್ದರೆ, ಇನ್ನುಳಿದ ಮೂವರ ಮೃತದೇಹಗಳು ಇಂದು ಪತ್ತೆಯಾಗಿವೆ.
ಮೃತದೇಹಗಳು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಿದ ಬಳಿಕ ಸಂಜೆ ವೇಳೆ ಕೋಲಾರಕ್ಕೆ ಕೊಂಡೊಯ್ಯಲಾಗುತ್ತದೆ.