ಸರ್ವಾಧಿಕಾರಿಗಳ ಆಯ್ಕೆ ವಿರುದ್ಧ ಜನಪರ ಹೋರಾಟ ಅನಿವಾರ್ಯ: ಇಂದೂಧರ ಹೊನ್ನಾಪುರ

ಕೋಲಾರ: ಹಿಂದೆ ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವದ ಸರಕಾರಗಳು ರೂಪುಗೊಳ್ಳುತ್ತಿದ್ದವು, ಈಗ ಪ್ರಜಾಪ್ರಭುತ್ವದಲ್ಲಿಯೇ ಸರ್ವಾಕಾರಿಗಳು ಆಯ್ಕೆಯಾಗಿ ಬರುತ್ತಿದ್ದು, ಜನಪರ ಹೋರಾಟಗಳು ಹಿಂದೆಂದಿಗಿಂತಲೂ ಈಗ ನೂರು ಪಟ್ಟು ಅನಿವಾರ್ಯ ಎಂದು ದಲಿತ ಚಳವಳಿಯ ಹಿರಿಯ ಮುಖಂಡ ಇಂದೂಧರ ಹೊನ್ನಾಪುರ ವಿಷಾದಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಜನಪರ ಉತ್ಸವದ ಭಾಗವಾಗಿ ಆಯೋಜಿಸಲಾಗಿದ್ದ ಸಮಕಾಲೀನ ಸಂದರ್ಭಗಳಲ್ಲಿ ದಲಿತ ಸಮುದಾಯದ ಮುಂದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ತಲ್ಲಣಗಳು ರಾಜ್ಯ ಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ದಲಿತ, ಶೋಷಿತ ಸಮುದಾಯದ ಆಶೋತ್ತರಗಳ ಶಕ್ತಿ ಕೇಂದ್ರವಾಗಿ ದಲಿತ ಚಳವಳಿ ರೂಪುಗೊಂಡಿತು. ಚಳವಳಿಯ ಬಹುತೇಕ ಬೀದಿ ಘೋಷಣೆಗಳು ಸರಕಾರದ ಕಾಯ್ದೆಗಳಾಗಿವೆ. ದಲಿತ ಚಳವಳಿಯ ಮುಂದುವರೆದ ಭಾಗ ರಾಜಕೀಯವಾಗಿರಲಿಲ್ಲ, ಚಳವಳಿಯಿಂದ ಅನೇಕರು ರಾಜಕೀಯವನ್ನು ಪ್ರವೇಶಿಸಿದರು. ಸರಕಾರಗಳಲ್ಲಿ ಎಸ್‌ಸಿಪಿ ಟಿಎಸ್‌ಪಿ ಹಣ ದುರುಪಯೋಗವಾಗುತ್ತಿದ್ದರೂ ಚಳವಳಿಯಿಂದ ಹೋದವರು ಪ್ರಶ್ನಿಸದೆ ರಾಜಕೀಯ ಪಕ್ಷಗಳ ಗುಲಾಮರಾಗಿದ್ದಾರೆ, ಇದನ್ನು ಚಳವಳಿಯೇ ಪ್ರಶ್ನಿಸುತ್ತಿದೆ ಎಂದರು.
ಜಗತ್ತಿನಲ್ಲಿ ಯಾವುದೇ ಚಳವಳಿಗಳು ಐದು ದಶಕಗಳ ನಂತರ ಮುಂದುವರೆದಿಲ್ಲ, ರಾಜಕಾರಣಕ್ಕೂ ಒಂದು ಮಿತಿ ಇದೆ. ಆದರೆ, ಸಾಂಸ್ಕೃತಿಕ, ನೈತಿಕ ಹಾಗೂ ಆಧ್ಯಾತ್ಮಿಕ ರಾಜಕಾರಣವನ್ನು ಹಿಮ್ಮೆಟ್ಟಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ದಲಿತ ಚಳವಳಿಗೆ ಸಾಂಸ್ಕೃತಿಕ ಹೋರಾಟವೇ ಉಸಿರಾಗಬೇಕು, ಈ ನಿಟ್ಟಿನಲ್ಲಿ ಅಧ್ಯಯನ, ಬರವಣಿಗೆ, ಚರ್ಚೆ, ಶಿಬಿರಗಳು ನಡೆಯಬೇಕು. ಚಳವಳಿಯ ಮುಖಂಡರು ಸರಿ ಹೋದರೆ ಚಳವಳಿಯೂ ಸರಿಹೋಗುತ್ತದೆ. ಜನಪರ ಚಳವಳಿಯ ಅನಿವಾರ್ಯತೆ 70ರ ದಶಕಕ್ಕಿಂತಲೂ ಈಗ ನೂರು ಪಟ್ಟು ಅನಿವಾರ್ಯವಾಗಿ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಒಳಮೀಸಲಾತಿ ಅನುಷ್ಠಾನಕ್ಕೆ ರಾಜ್ಯ ಸರಕಾರ ಮೀನಾಮೇಷ ಎಣಿಸುತ್ತಿದೆ, ಜಾತಿ ಗಣತಿ ಆಯೋಗ ಕೊಟ್ಟ ವರದಿ ಇದುವರೆವಿಗೂ ಬಿಡುಗಡೆಯಾಗಿಲ್ಲ. ಚಳವಳಿ ಇವೆಲ್ಲವನ್ನು ಪ್ರಶ್ನಿಸುವಂತಾಗಬೇಕು ಎಂದರು.
ಸಾಂಸ್ಕೃತಿಕ ಅಸ್ಮಿತೆ ಕುರಿತು ಸಾಹಿತಿ ಸದಾನಂದ ಮರ್ಜಿ ಮಾತನಾಡಿ, ಅಂಬೇಡ್ಕರ್ ಮೂಲ ಆಶಯಗಳನ್ನು ಅನುಸರಿಸದೆ, ದಲಿತರ ಗಮನವನ್ನು ಅಮೂರ್ತ ಚರ್ಚೆ, ವಿಚಾರಗಳ ಮೂಲಕ ಬೇರೆಡೆಗೆ ಸೆಳೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ನಡೆಸಬೇಕೆಂದರು.
ಮಹಿಳಾ ಅಸ್ಮಿತೆ ಕುರಿತು ಮಾತನಾಡಿದ ಡಾ.ನೇತ್ರಾವತಿ, ದಲಿತ ಚಳವಳಿಯಲ್ಲಿ ಮಹಿಳೆಯರು ನೇರವಾಗಿ ಪಾಲ್ಗೊಳ್ಳದಿದ್ದರೂ ತೆರೆ ಮರೆಯಲ್ಲಿ ಚಳವಳಿಯನ್ನು ಪ್ರೋತ್ಸಾಹಿಸುತ್ತಾ ಬೆನ್ನೆಲುಬಾಗಿದ್ದರೆಂದರು.
ಸಾಮಾಜಿಕ ಅಸ್ಮಿತೆ ಕುರಿತು ಡಾ.ಅಪ್ಪುಗೆರೆ ಸೋಮಶೇಖರ್ ಮಾತನಾಡಿದರು. ವಿಚಾರ ಮಂಡನೆ ಕುರಿತಂತೆ ಡಾ.ಎಂ.ಚಂದ್ರಶೇಖರ್, ಡಾ.ವಿವಿವಿಗಿರಿ, ವರದೇನಹಳ್ಳಿ ವೆಂಕಟೇಶ್, ದೊರೈರಾಜ್, ಡಾ.ಮುರಳೀಧರ್ ಬೆಲ್ಲದ ಮಡು, ಕೆ.ಎಸ್.ಗಣೇಶ್, ಹೂವಳ್ಳಿ ಪ್ರಕಾಶ್ ಇತರರು ಸಂವಾದ ನಡೆಸಿದರು.
ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ದಸಂಸ ಹಿರಿಯ ಮುಖಂಡ ಎನ್.ವೆಂಕಟೇಶ್, ಡಿಸಿ ಡಾ.ಎಂ.ಆರ್.ರವಿ, ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್.ಚಲವಾದಿ, ಉಪ ವಿಭಾಗಾಕಾರಿ ಡಾ.ಮೈತ್ರಿ, ಪತ್ರಕರ್ತ ರವಿಕುಮಾರ್ ಟೆಲೆಕ್ಸ್ ಸೇರಿ ಇತರರು ಹಾಜರಿದ್ದರು. ರೇಣುಕಾ ಕಾರ್ಯಕ್ರಮ ನಿರೂಪಿಸಿದರು.