ಕೋಲಾರ | ಕಲ್ಲು, ಮಣ್ಣು ಎತ್ತುವ ಕೆಲಸಕ್ಕೆ ವಿದ್ಯಾರ್ಥಿಗಳ ಬಳಕೆ ಆರೋಪ: ಉಪ ಪ್ರಾಂಶುಪಾಲರನ್ನು ವಜಾಗೊಳಿಸುವಂತೆ ಒತ್ತಾಯ
ಕೋಲಾರ: ಶಾಲೆಯ ಸಮಯದಲ್ಲಿ ಕಲ್ಲು, ಮಣ್ಣು ಎತ್ತುವ ಕೆಲಸಕ್ಕೆ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿರುವ ಉಪ ಪ್ರಾಂಶುಪಾಲರಾದ ಬಿ.ಎಂ ರಾಧಮ್ಮ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಒತ್ತಾಯಿಸಿದ್ದಾರೆ.
ಕೋಲಾರ ನಗರದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಪಕ್ಕದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೈಯಿಂದ ಶಾಲೆಯ ಸಮಯದಲ್ಲಿ ಗೋಡೆ ಕೆಡವುದು, ಕಲ್ಲು ಮತ್ತು ಮಣ್ಣು ಎತ್ತುವ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಉಪ ಪ್ರಾಂಶುಪಾಲರಾದ ಬಿ.ಎಂ.ರಾಧಮ್ಮ ಅವರ ಕ್ರಮ ಖಂಡನೀಯ. ಉಪ ಪ್ರಾಂಶುಪಾಲರು ಕೆಲಸ ಮಾಡಿಲ್ಲ ಎಂದರೆ ವಿದ್ಯಾರ್ಥಿಗಳನ್ನು ಥಳಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಖಾಸಗಿ ಶಾಲೆಗಳ ಹಾವಳಿಗಳ ಮಧ್ಯೆ ಇಂತಹ ಶಿಕ್ಷಕರು ಇರುವುದರಿಂದಲೇ ಸರಕಾರಿ ಶಾಲೆಗಳು ದಿನದಿಂದ ದಿನಕ್ಕೆ ಮಾಯವಾಗುತ್ತಿವೆ. ಸರಕಾರಿ ಶಾಲೆ, ಮಕ್ಕಳೆಂದರೆ ಸರಕಾರಿ ಶಿಕ್ಷಕರಿಗೆ ಇಷ್ಟೊಂದು ತಾತ್ಸಾರವೇ?. ಬಡಮಕ್ಕಳು , ರೈತ ಕೂಲಿ ಕಾರ್ಮಿಕರ ಮಕ್ಕಳು, ದಲಿತ ವಿದ್ಯಾರ್ಥಿಗಳು, ಅಲ್ಪಸಂಖ್ಯಾತ ವಿದ್ಯಾರ್ಥಿಗಳು, ಸರಕಾರಿ ಶಾಲೆಗೆ ಬಂದು ನಾಲ್ಕು ಅಕ್ಷರ ಕಲಿತು ಅವರ ಕುಟುಂಬಗಳಿಗೆ ಆಸರೆ ಆಗಬೇಕಾದ ಮಕ್ಕಳನ್ನು ಈ ರೀತಿಯಾಗಿ ನಡೆಸಿಕೊಳ್ಳುವ ಶಿಕ್ಷಕರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳು ಸರಿಯಾಗಿ ಅಭ್ಯಾಸ ಮಾಡಿಕೊಳ್ಳದೆ ಪರೀಕ್ಷೆ ಎದುರಿಸಲು ಸಾಧ್ಯವೇ?. ಈ ಎಲ್ಲಾ ಪ್ರಶ್ನೆಗಳಿಗೆ ಸರಕಾರ ಮತ್ತು ಶಿಕ್ಷಣ ಇಲಾಖೆ ಉತ್ತರ ಕೊಡಲೇಬೇಕು. ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಅವರನ್ನು ಸೇವೆಯಿಂದ ವಜಾ ಗೊಳಿಸಬೇಕು. ಉಪ ನಿರ್ದೇಶಕರ ಕಛೇರಿ ಪಕ್ಕದ ಶಾಲೆಯಲ್ಲಿ ಈ ರೀತಿ ಆದರೆ, ಗಡಿ ಭಾಗದ ಶಾಲೆಗಳ ಗತಿ ಏನು ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಸರಕಾರ ಮತ್ತು ಶಿಕ್ಷಣ ಇಲಾಖೆ ಇದರ ವಿರುದ್ಧ ಸರಿಯಾದ ರೀತಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಮಾತನಾಡಿ, ಸರಕಾರಿ ಶಾಲೆಯ ಶಿಕ್ಷಕರುಗಳು ವಿದ್ಯಾರ್ಥಿಗಳ ಕೈಯಿಂದ ಯಾಕೆ ಈ ರೀತಿಯ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಕಟ್ಟಡ ರಿಪೇರಿಗೆ ಸರಕಾರ ಅನುದಾನ ನೀಡುತ್ತಿಲ್ಲವೇ ಈ ಕೆಲಸಗಳಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದಿಲ್ಲವೇ?. ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಇಂತಹ ಕೆಲಸಕ್ಕೆ ಬಳಸಿಕೊಳ್ಳುವುದಾದರೆ ಶಾಲೆಗೆ ಮಕ್ಕಳನ್ನು ಪೋಷಕರು ಯಾಕೆ ಕಳಿಸಬೇಕು? ಎಂದು ಪ್ರಶ್ನಿಸಿದ್ದಾರೆ.
ಆದ್ದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಕಾರ ಇವರ ಮೇಲೆ ಕ್ರಮ ಕೈಗೊಳ್ಳಲೇಬೇಕು ಇಲ್ಲವಾದಲ್ಲಿ ಸಂಬಂಧಪಟ್ಟ ಕೋಲಾರ ಜಿಲ್ಲಾ ಆಡಳಿತದ ಮುಂದೆ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.. ಹಾಗೂ ಸರ್ಕಾರಿ ಶಾಲೆಗಳು ಉಳಿವಿಗಾಗಿ ನಮ್ಮ ಹೋರಾಟ ನಿರಂತರವಾಗಿ ಇಂಥವರ ವಿರುದ್ಧ ಜೀವಂತವಾಗಿರಲಿದೆ ಎಂದು ತಿಳಿಸಿದ್ದಾರೆ.