ಕೋಲಾರ | ಕಾರು-ಬೈಕ್ ಮಧ್ಯೆ ಅಪಘಾತ: ಮಗು ಸಹಿತ ನಾಲ್ವರು ಮೃತ್ಯು

ಕೋಲಾರ: ಕಾರು ಮತ್ತು ಬೈಕ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿ ಒಟ್ಟು ನಾಲ್ವರು ಮೃತಪಟ್ಟ ಘಟನೆ ಬಂಗಾರಪೇಟೆ ತಾಲೂಕಿನ ಕುಪ್ಪನಹಳ್ಳಿ ಬಳಿಯ ನೂತನ ಚೆನ್ನೈ- ಬೆಂಗಳೂರು ಕಾರಿಡಾರ್ ಹೆದ್ದಾರಿಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕಮ್ಮಸಂದ್ರ ನಿವಾಸಿಗಳೆಂದು ಗುರುತಿಸಲಾಗಿದೆ. ಕಾರು ಮಾಲಕ ಸಂತೋಷ್ ಎಂಬವರ ಮಾವ ಮಹೇಶ್(55), ಪುತ್ರಿ ಉದ್ವಿತಾ (3), ತಾಯಿ ರತ್ನಮ್ಮ (60) ಹಾಗೂ ಬೈಕ್ ಸವಾರ ಬಂಗಾರಪೇಟೆ ತಾಲೂಕಿನ ದೊಡ್ಡೂರು ಗ್ರಾಮದ ಶ್ರೀನಾಥ್ ಎಂಬವರು ಮೃತಪಟ್ಟಿದ್ದಾರೆ.
ಸಂತೋಷ್ ಪತ್ನಿ ತುಂಬು ಗರ್ಭಿಣಿ ಸುಶ್ಮಿತಾ, ಮಗ ವಿರಾಟ್, ಅತ್ತೆ ಸುಜಾತಾ ಹಾಗೂ ಕಾರು ಚಾಲಕ ಅರುಣ್ ಗಂಭೀರ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಶ್ಮಿತಾರ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಸಂತೋಷ್ ಕುಟುಂಬ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದ ಸಂಬಂಧಿಕರೊಬ್ಬರ ಯೋಗಕ್ಷೇಮ ವಿಚಾರಿಸಿಕೊಂಡು ಕಾರಿನಲ್ಲಿ ಊರಿಗೆ ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬೈಕ್ ಢಿಕ್ಕಿಯಾಗಿದ್ದರಿಂದ ಕಾರು ರಸ್ತೆಬದಿಗೆ ಉರುಳಿಬಿದ್ದಿದೆ.
ಕೋಟಿಲಿಂಗ ಕ್ಷೇತ್ರದಲ್ಲಿ ಮ್ಯಾನೇಜರ್ ಆಗಿರುವ ಸಂತೋಷ್ ನಿನ್ನೆ ತನ್ನ ಹುಟ್ಟುಹಬ್ಬವಾದ ಕಾರಣ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಕಮ್ಮಸಂದ್ರದಲ್ಲೇ ಉಳಿದುಕೊಂಡಿದ್ದು, ಕುಟುಂಬಸ್ಥರನ್ನ ಕಾರಿನಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿರುವ ಸಂಬಂಧಿಕರ ಯೋಗ ಕ್ಷೇಮ ವಿಚಾರಿಸಲು ಕಳುಹಿಸಿದ್ದರೆನ್ನಲಾಗಿದೆ.
ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.