ಕೋಲಾರ: ಮರಕ್ಕೆ ಕಾರು ಢಿಕ್ಕಿ; ಮೂವರು ಮೃತ್ಯು
ಬಸನಗೌಡ | ಪ್ರಜ್ವಲ್ | ಹರ್ಷವರ್ಧನ್
ಕೋಲಾರ: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯದ ಕೋಲಾರ-ಬಂಗಾರಪೇಟೆ ಮುಖ್ಯರಸ್ತೆಯ ಸಹಕಾರ ನಗರ ಬಳಿ ಶನಿವಾರ ಸಂಭವಿಸಿದ.
ಹಾಸನದ ಹರ್ಷವರ್ಧನ್, ಬಳ್ಳಾರಿಯ ಬಸನಗೌಡ ಹಾಗೂ ಕೋಲಾರ ಜಿಲ್ಲೆ ಬಂಗಾರಪೇಟೆಯ ಪ್ರಜ್ವಲ್ ಮೃತ ಯವಕರು. ಕಾರಿನಲ್ಲಿದ್ದ ಬಂಗಾರಪೇಟೆಯ ಸಾಯಿ ಗಗನ್ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಷವರ್ಧನ್, ಬಸನಗೌಡ ಹಾಗೂ ಸಾಯಿ ಗಗನ್ ಈ ಮೂವರೂ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು. ಇವರ ಸ್ನೇಹಿತ ಪ್ರಜ್ವಲ್ ಬಂಗಾರಪೇಟೆಯಲ್ಲಿ ತಂದೆಯ ಜೊತೆ ಹಣಕಾಸು ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಕಾರು ತುಂಬಾ ವೇಗಲ್ಲಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಎರಡು ತುಂಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜಿಗೆ ರಜೆ ಇದ್ದ ಕಾರಣ ಬಂಗಾರಪೇಟೆ ಸ್ನೇಹಿತನ ಮನೆಗೆ ಹೋಗುವುದಾಗಿ ಪೋಷಕರಿಗೆ ತಿಳಿಸಿ ಬೇರೊಬ್ಬ ಸ್ನೇಹಿತನೊಬ್ಬನ ಕಾರು ತೆಗೆದುಕೊಂಡು ಬಂದಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಕೋಲಾರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಕಾಂತರಾಜ್, ಪಿಎಸ್ಐ ಭಾರತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓವರ್ ಟೇಕ್ ಮಾಡುವ ಭರದಲ್ಲಿ ಮರಕ್ಕೆ ಕಾರು ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದುದೇ ಈ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಾರಿನಲ್ಲಿದ್ದವರ ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ತಿಳಿಸಿದ್ದಾರೆ.