ಕೋಲಾರ: ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ನಾಮಪತ್ರ ಸಲ್ಲಿಕೆ
ಕೋಲಾರ: ಲೋಕಸಭಾ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ ಗೌತಮ್ ಅವರು ಗುರುವಾರ ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಚುನಾವಣಾಧಿಕಾರಿ ಅಕ್ರಂ ಪಾಷ ಅವರಿಗೆ ನಾಮಪತ್ರ ಸಲ್ಲಿಸಿದರು.
ಅಭ್ಯರ್ಥಿ ಕೆ.ವಿ ಗೌತಮ್ ಅವರು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಬೆಳಗ್ಗೆ ನಗರದ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮೆಥೋಡಿಸ್ಟ್ ಚರ್ಚ್‌ಗೆ ಭೇಟಿ ನೀಡಿ ಮುಖಂಡರ ಆಶೀರ್ವಾದ ಪಡೆದು ಕ್ಲಾಕ್ ಟವರ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ನೇರವಾಗಿ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮೊದಲ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಎಸ್.ಎನ್ ನಾರಾಯಣಸ್ವಾಮಿ ಭಾಗವಹಿಸಿದ್ದರು
ನಂತರ ಎರಡನೇ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ಶಾಸಕಿ ರೂಪ ಶಶಿಧರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಮುಖಂಡ ರಾಜೀವ್ ಗೌಡ ಜೊತೆಯಲ್ಲಿ ಇದ್ದು ಇವರಿಗೆ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತಾ, ಶಾಸಕರಾದ ಕೊತ್ತೂರು ಮಂಜುನಾಥ್, ಕೆ.ವೈ ನಂಜೇಗೌಡ, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಮುಖಂಡರಾದ ಆದಿನಾರಾಯಣ, ಪುಟ್ಟು ಅಂಜಿನಪ್ಪ, ನಂದಿನಿ ಪ್ರವೀಣ್, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಕೆಪಿಸಿಸಿ ಕಾರ್ಯದರ್ಶಿ ಕಾರ್ತಿಕ್ ಸೇರಿದಂತೆ ಮುಂತಾದವರು ಸಾಥ್ ನೀಡಿದರು
ನಾಮಪತ್ರ ಸಲ್ಲಿಕೆಯ ನಂತರ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಪತ್ರಕರ್ತರೊಂದಿಗೆ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತದೆ. ಜಾತ್ಯಾತೀತ ಸಿದ್ಧಾಂತಗಳ ಮೇಲಿ ನಿಂತಿರುವ ಕಾಂಗ್ರೆಸ್ ಪಕ್ಷದಲ್ಲಿ ೪೦ ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಒಬ್ಬರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಅದರಂತೆ ಅವರನ್ನು ಗೆಲ್ಲಿಸಿಕೊಳ್ಳಲು ಎಲ್ಲರೂ ಒಂದಾಗಿ ದುಡಿಯುತ್ತೇವೆ. ಕೋಲಾರ ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಮೂರು ಸಚಿವರಿಗೆ ನೀಡಲಾಗಿದ್ದು ಮುಕ್ತ ಮನಸ್ಸಿನಿಂದ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡುತ್ತೇವೆ ಜಿಲ್ಲಾ ಉಸ್ತುವಾರಿ ಸಚಿವರು ಯಾವಾಗ ಪ್ರಚಾರಕ್ಕೆ ಕರೆದರೆ ಆಗ ಬಂದು ಕೆಲಸ ಮಾಡುತ್ತೇನೆ ಎಂದರು
ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ ಪಕ್ಷದ ಹಿರಿಯ ನಾಯಕರಾದ ಕೆ.ಎಚ್.ಮುನಿಯಪ್ಪ ಅವರು ನಾಮಪತ್ರ ಸಲ್ಲಿಕೆಗೆ ಬಂದಿದ್ದು ಇಡೀ ಕಾಂಗ್ರೆಸ್ ಪಕ್ಷ ಒಂದಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ ಮುನಿಯಪ್ಪ ಅವರು ಏಳು ಬಾರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅವರ ಅವಶ್ಯಕತೆಯಿದೆ. ಅದರಂತೆ ಅವರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಮೂರು ಬಾರಿ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು ನಮ್ಮಲ್ಲಿ ಗುಂಪುಗಳು ಇಲ್ಲ ಜಿಲ್ಲೆಯ ನಾಯಕರು ಅಭ್ಯರ್ಥಿಯೊಂದಿಗೆ ಹೋಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದರು.
ಎಂಎಲ್ಸಿ ನಸೀರ್ ಅಹಮದ್ ಮಾತನಾಡಿ ಮಾಧ್ಯಮಗಳು ಅಪೇಕ್ಷಿಸಿದಂತೆ ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಿಲ್ಲ ಎಂಬುದನ್ನು ಪ್ರದರ್ಶಿಸಿದ್ದು ನಾವೆಲ್ಲರೂ ಒಂದಾಗಿದ್ದೇವೆ ಸಾಬೀತು ಮಾಡಿದ್ದೇವೆ ಎಂದರು.