ಕೋಲಾರ | ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯರ ಮೇಲಿನ ಹಲ್ಲೆಗೆ ದಲಿತ ಸಂಘಟನೆಗಳ ಮುಖಂಡರಿಂದ ಖಂಡನೆ
ಕೋಲಾರ: ನಾಡಿನ ಸಾಂಸ್ಕೃತಿಕ ಲೋಕದ ಪ್ರತಿನಿಧಿ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ನಡೆದ ಹಲ್ಲೆ, ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಎಂದು ಹಿರಿಯ ಪತ್ರಕರ್ತರು ಹಾಗೂ ರಾಜ್ಯ ದಲಿತ ಸಂಘಟನೆಗಳ ಚಾಲನಾ ಸಮಿತಿಯ ಮುಖಂಡ ಇಂದೂಧರ ಹೊನ್ನಾಪುರ ಹೇಳಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ನಡೆದ ಹಲ್ಲೆ ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ನಂತರ, ವಾರ್ತಾಭಾರತಿ ಜೊತೆ ಮಾತನಾಡಿದರು.
ರಾಮಯ್ಯ ನವರ ಮೇಲೆ ನಡೆದ ಘಟನೆ, ಪೂರ್ವ ನಿಯೋಜಿತ ಅಲ್ಲದೇ ಇದ್ದರೂ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು . ನಾಡಿನ ಹಿರಿಯ ಸಾಹಿತಿ, ಸಾಂಸ್ಕೃತಿಕ ಲೋಕದ ರಾಯಭಾರಿ, ಸಾಂಸ್ಕೃತಿಕ ಚಿಂತಕರಿಗೆ ಭದ್ರತೆಯ ಅವಶ್ಯಕತೆ ಇದೆ. ಇದನ್ನು ಸಾಮಾನ್ಯ ಘಟನೆ ಎಂದು ತಿಳಿಯದೆ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಗಡ್ಡಂ ಎನ್.ವೆಂಕಟೇಶ್ ಮಾತನಾಡಿ, ಚಳುವಳಿಕಾರರ ಮೇಲೆ ಹಲ್ಲೆ ನಡೆಸಿದ ಘಟನೆ ಇದೇ ಮೊದಲೇನೂ ಅಲ್ಲ, ಆದರೆ, ಕೋಟಿಗಾನಹಳ್ಳಿ ರಾಮಯ್ಯ ನಂತಹ ಪ್ರಗತಿಪರ, ಜೀವಪರ ಚಿಂತಕರ ಮೇಲೆ ಹಲ್ಲೆ ತೀವ್ರ ಖಂಡನಾರ್ಹ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಶೋಷಿತ ಸಮುದಾಯಗಳ ಮನೆ ಮನೆಯಲ್ಲೂ ನೆನೆಯುವ ಮನುಷ್ಯ ಪ್ರೇಮಿ ಇವರು, ತಮ್ಮ ಅಪಾರ ಜ್ಞಾನದ ಮೂಲಕ ತಳಸಮುದಾಯಗಳ ಪ್ರಜ್ಞೆಗೆ ಜೀವ ನೀಡಿದ್ದಾರೆ. ಇವರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು, ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.