ಕೋಲಾರ: ಪ್ರತಿಭಟನಾ ನಿರತ ರೈತರ ಮೇಲೆ ಹಲ್ಲೆ ಆರೋಪ; ದೂರು, ಪ್ರತಿದೂರು
ಕೋಲಾರ, ಡಿಸೆಂಬರ್ .09 : ಪ್ರತಿಭಟನಾ ನಿರತ ರೈತ ಸಂಘದ ಮುಖಂಡರ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗರಿಂದ ಹಲ್ಲೆ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಸೋಮವಾರ ಬೆಳಿಗ್ಗೆ ಶ್ರೀನಿವಾಸಪುರ ತಾಲ್ಲೂಕು ಕಚೇರಿ ಎದುರು ರೈತ ಸಂಘದ ಮುಖಂಡರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಧೀನದಲ್ಲಿ ಇರುವ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಸ್ಥಳಕ್ಕೆ ಆಗಮಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗರು ಪ್ರತಿಭಟನಾ ನಿರತ ರೈತ ಸಂಘದ ಮುಖಂಡರನ್ನು ಪೊಲೀಸರ ಸಮ್ಮುಖದಲ್ಲೇ ಥಳಿಸಿದರು ಎನ್ನಲಾಗಿದೆ.
ಶ್ರೀನಿವಾಸಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೈತ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರು, ರೈತ ಸಂಘದ ಮಂಜುನಾಥ್ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆ ಪ್ರಕರಣದ ಬಗ್ಗೆ ರೈತ ಸಂಘದ ಮುಖಂಡರು ಕೋಲಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್ ಅವರಿಗೆ ದೂರು ನೀಡಿದ್ದು, ರೈತ ಸಂಘದ ಮುಖಂಡರ ವಿರುದ್ದ ಕಾಂಗ್ರೆಸ್ ಮುಖಂಡರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಕೇಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.