ಕೋಲಾರ: ಪ್ರತಿಭಟನಾ ನಿರತ ಕಾರ್ಮಿಕರ ಮೇಲೆ ಹಲ್ಲೆ; ದೂರು ದಾಖಲು
ಕೋಲಾರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾ ನಿರತ ಕಾರ್ಮಿಕರ ಮೇಲೆ ಸ್ಥಳಿಯ 100 ಕ್ಕೂ ಹೆಚ್ಚು ಗುಂಡಾಗಳನ್ನು ಕರೆಸಿ ಹಲ್ಲೆ ಮಾಡಿಸಿರುವ ಘಟನೆ ಕೋಲಾರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಮಾನದ ಬಿಡಿಭಾಗಗಳನ್ನು ತಯಾರಿಸುವ ಮಹೇಂದ್ರ ಏರೋಸ್ಪೇಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿ ದಿನ ತಮ್ಮ ಪಾಳಿ ಆರಂಭಕ್ಕೂ ಮುನ್ನ ಪ್ರತಿಭಟನೆ ನಡೆಸಿ ನಂತರ ಯಥಾ ಪ್ರಕಾರ ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು.
ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇನ್ಶೂರೆನ್ಸ್, ಹಾಗೂ ತಿಂಗಳ ಭತ್ಯೆ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ಕಂಪನಿಯ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು.
ಪ್ರತಿಭಟನೆಯನ್ನು ಸಹಿಸದೇ ಕಂಪನಿಯ ಆಡಳಿತ ಮಂಡಳಿಯವರೇ ಸ್ಥಳೀಯ 100 ಕ್ಕೂ ಹೆಚ್ಚು ಪುಡಿ ರೌಡಿಗಳನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ. ಹಲ್ಲೆಯಿಂದ 3 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಂಪನಿಯಲ್ಲಿ ಆಂಬ್ಯುಲೆನ್ಸ್ ಇದ್ದರೂ ಗಾಯಾಳುಗಳನ್ನು ಆಸ್ಪತ್ರೆಗೆ ದಾಳಿಸಲು ಮುಂದಾಗಿಲ್ಲ ನಂತರ 108 ಆಂಬ್ಯಲೆನ್ಸ್ ಬರುತ್ತಿದ್ದಂತೆ ಕಂಪನಿಯಲ್ಲಿದ್ದ ಆಂಬ್ಯುಲೆನ್ಸ್ ಮೂಲಕ ಗಾಯಾಳು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು ಕೇವಲ ಕಣ್ಣೊರೆಸುವ ಸಲುವಾಗಿ ಈ ರೀತಿಯಾಗಿ ವರ್ತಿಸಿದ್ದಾರೆ ಎಂದು ಹಲ್ಲೆಗೊಳಗಾದ ಕಾರ್ಮಿಕರು ಆರೋಪಿಸಿದ್ದಾರೆ.
ಕಳೆದ ಒಂದುವರೆ ವರ್ಷದ ಹಿಂದೆಯೇ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಯೂನಿಯನ್ ಅನ್ನು ಕೂಡಾ ನೋಂದಣಿ ಮಾಡಿಸಿಕೊಂಡಿದ್ದರು.
ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು ಹಲ್ಲೆಗೊಳಗಾದ ಕಾರ್ಮಿಕರಿಂದ ವೇಮಗಲ್ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ. ವೇಮಗಲ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.