ಕೋಲಾರ | ನವದಂಪತಿ ಬಡಿದಾಡಿಕೊಂಡು ಮೃತ್ಯು ಪ್ರಕರಣ : ಮೂರನೇ ವ್ಯಕ್ತಿಯ ಕೈವಾಡ?
ನವೀನ್ ಹಾಗೂ ಲಿಖಿತಶ್ರೀ
ಕೋಲಾರ : ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಧು -ವರರು ಬಡಿದಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ವ್ಯಕ್ತಿಯ ಕೈವಾಡ ಇರುವ ಬಗ್ಗೆ ವಧು ಲಿಖಿತಶ್ರೀ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣ ಬೇರೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.
ಈ ಬಗ್ಗೆ ವಧು ಲಿಖಿತಶ್ರೀಯ ತಾತ ವೆಂಕಟರವಣಪ್ಪ ಹಾಗೂ ತಂಗಿ ಅರ್ಚನಾ ಮೂರನೇ ವ್ಯಕ್ತಿಯ ಕೈವಾಡದ ಬಗ್ಗೆ ಆರೋಪ ಮಾಡಿದ್ದು, ದಂಪತಿಗಳು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಲ್ಲೂ ಇಬ್ಬರೂ ತುಂಬಾ ಖುಷಿಯಿಂದ ಇದ್ದರು ಎಂದು ತಾತ ವೆಂಕಟರವಣಪ್ಪ ಹೇಳಿದ್ದಾರೆ.
ನವ ದಂಪತಿಗಳು ಹೊಡರದಾಡಿಕೊಂಡಿರುವುದು ಅನುಮಾನಾಸ್ಪದ. ಯಾರೋ ಮೂರನೇ ವ್ಯಕ್ತಿ ಇದರ ಹಿಂದೆ ಇದ್ದಾರೆ ಎಂದು ಲಿಖಿತಶ್ರೀ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ..
ನವದಂಪತಿ ಹೊಡೆದಾಟ ಪ್ರಕರಣದ ಹಿನ್ನೆಲೆ :
ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ಬುಧವಾರ ನವೀನ್ ಹಾಗೂ ಲಿಖಿತಶ್ರೀ ವಿವಾಹ ಅದ್ದೂರಿಯಾಗಿ ನೆರವೇರಿದೆ. ಚಂಬರಸನಹಳ್ಳಿ ಗ್ರಾಮದ ನವೀನ್ ಕೆಲವು ವರ್ಷಗಳಿಂದ ಆಂಧ್ರಪ್ರದೇಶದ ಬೈನಪಲ್ಲಿ ಗ್ರಾಮದ ಲಿಖಿತಶ್ರೀಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಮನೆಯವರನ್ನು ಒಪ್ಪಿಸಿ ಗ್ರಾಮದಲ್ಲಿ ವಿವಾಹವಾಗಿದ್ದಾರೆ. ಆದರೆ, ಮದುವೆಯಾದ ಕೆಲವೇ ಗಂಟೆಗಳಲ್ಲಿ ದೊಡ್ಡ ಅನಾಹುತವೇ ನಡೆದುಹೋಗಿದೆ.
ವಿವಾಹದ ನಂತರ ಕೊಠಡಿಗೆ ತೆರಳಿದ ಜೋಡಿ ಏಕಾಏಕಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದರ ಪರಿಣಾಮವಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ವಧು ಲಿಖಿತಶ್ರೀ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.
ಗಂಭೀರವಾಗಿ ಗಾಯಗೊಂಡಿರುವ ವರ ನವೀನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆತನೂ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ.