ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಸಮುದ್ರ ಪಾಲು : ಶಿಕ್ಷಕರು ಅಮಾನತು
ಕೋಲಾರ : ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಬಂದು ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗಿರುವ ಕೋಲಾರದ ಮುಳಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೂವರು ವಿದ್ಯಾರ್ಥಿನಿಯರ ದೇಹ ಪತ್ತೆಗೆ ಬುಧವಾರವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ನಿನ್ನೆ(ಮಂಗಳವಾರ) ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಒಬ್ಬ ವಿದ್ಯಾರ್ಥಿನಿ ಮೃತಪಟ್ಟಿದ್ದಳು. ಮೂವರು ವಿದ್ಯಾರ್ಥಿನಿಯರು ಕಣ್ಮರೆಯಾಗಿದ್ದಾರೆ. ಇನ್ನು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಶ್ರಾವಂತಿ ಗೋಪಾಲಪ್ಪ (15) ಮೃತ ವಿದ್ಯಾರ್ಥಿನಿ. ವಿದ್ಯಾರ್ಥಿನಿಯರಾದ ದೀಕ್ಷಾ ಜೆ. (15), ಲಾವಣ್ಯ (15) ಹಾಗೂ ವಂದನಾ (15) ಕಣ್ಮರೆಯಾಗಿದ್ದಾರೆ.
ಪ್ರಾಂಶುಪಾಲೆ ಅಮಾನತು :
ಈ ಘಟನೆಗೆ ಸಂಬಂಧಿಸಿದಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶಶಿಕಲಾ ಹಾಗೂ ಅತಿಥಿ ಶಿಕ್ಷಕರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು ಹಾಗೂ 8 ಶಿಕ್ಷಕರು ಸೇರಿದಂತೆ 54 ಮಂದಿ ಮುರುಡೇಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದರು.