ಕೊಳ್ಳೇಗಾಲ ನಗರಸಭೆ ಅಧಿಕಾರಿಗಳ ಎಡವಟ್ಟು; ಅರ್ಜಿದಾರನ ಹೆಸರಲ್ಲೇ ಮರಣ ಪ್ರಮಾಣ ಪತ್ರ
ಚಾಮರಾಜನಗರ: ತಾಯಿ ಮೃತಪಟ್ಟಿರುವ ಬಗ್ಗೆ ದೃಢೀಕರಣ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದ ಮಗನ ಹೆಸರಲ್ಲೇ ಮರಣ ಪ್ರಮಾಣ ಪತ್ರ ನೀಡಿ ಎಡವಟ್ಟು ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕೊಳ್ಳೇಗಾಲ ಪಟ್ಟಣದ ಹಳೇ ಕುರುಬರ ಬೀದಿಯ ನಿವಾಸಿ ಶಂಕರ್ ಅವರ ತಾಯಿ ಪುಟ್ಟಮ್ಮ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿದ್ದು, ಅವರ ಶವ ಸಂಸ್ಕಾರವನ್ನು ಕೊಳ್ಳೇಗಾಲದಲ್ಲಿ ಕುಟುಂಬಸ್ಥರು ನೆರವೇರಿಸಿದ್ದರು. ಮೃತರ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ದೃಢೀಕರಣ ಪತ್ರ ನೀಡುವಂತೆ ನಗರಸಭೆಗೆ ಶಂಕರ್ ಅವರು ಅರ್ಜಿ ಸಲ್ಲಿಸಿದ್ದರು.
ಆದರೆ ನಗರಸಭೆಯ ಕಂಪ್ಯೂಟರ್ ಆಪರೇಟರ್ ಎಡವಿಟ್ಟಿನಿಂದ ತಾಯಿಯ ಮರಣ ಪ್ರಮಾಣ ಪತ್ರ ಕೇಳಿ ಮಗ ಅರ್ಜಿ ಸಲ್ಲಿಸಿದರೆ, ಮಗನ ಶವ ಸಂಸ್ಕಾರ ದೃಢೀಕರಿಸಿದ್ದು ಕರ್ತವ್ಯಲೋಪ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ತನ್ನ ತಾಯಿ ಮೃತಪಟ್ಟಿದ್ದಾರೆಂದು ಶವಸಂಸ್ಕಾರದ ದೃಢೀ ಕರಣ ಪತ್ರ ಕೇಳಿದರೆ ಬದುಕಿರುವ ನನ್ನನ್ನೇ ಸಾಯಿಸಿದ್ದಾರೆ. ನನ್ನಿಂದ ಸೀಲ್ ಹಾಕಲು ನೂರು ರೂಪಾಯಿ ಹಣವನ್ನೂ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿರುವ ಶಂಕರ್ ಅವರು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.