‘ಆಲಿಕಲ್ಲು ಮಳೆ’ಗೆ ಕೊಪ್ಪಳ ಜಿಲ್ಲೆಯಲ್ಲಿ 12,722 ಹೆಕ್ಟರ್ ಬೆಳೆ ಹಾನಿ: ಸಚಿವ ತಂಗಡಗಿ

ಸಚಿವ ಶಿವರಾಜ್ ಎಸ್. ತಂಗಡಗಿ
ಕೊಪ್ಪಳ: ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಕೊಪ್ಪಳ ಜಿಲ್ಲೆಯಲ್ಲಿ 12,722.46 ಹೆಕ್ಟರ್ ಭತ್ತದ ಬೆಳೆ ಹಾನಿಯಾಗಿದೆ. ಈ ಪೈಕಿ ಕಾರಟಗಿ ತಾಲೂಕಿನಲ್ಲಿ 4.895.33ಹೆಕ್ಟರ್ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದ್ದಾರೆ.
ರವಿವಾರ ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ಕನಕಗಿರಿ ಹಾಗೂ ಕಾರಟಗಿ ತಾಲೂಕಿನ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಆಲಿಕಲ್ಲು ಮಳೆಯಿಂದ ನಮ್ಮ ಕಾರಟಗಿ ತಾಲೂಕಿನಲ್ಲಿ ಹೆಚ್ಚು ಭತ್ತದ ಬೆಳೆ ನಾಶವಾಗಿದೆ. ಉಳಿದಂತೆ ಮಳೆ, ಗಾಳಿಯಿಂದ ದೊಡ್ಡ ಪ್ರಮಾಣದ ಬೆಳೆ ನಷ್ಟವಾಗಿದೆ. ಕಾರಟಗಿ, ಕೂಕನೂರು, ಕನಕಗಿರಿ ಗಂಗಾವತಿ ಸೇರಿ ಕೊಪ್ಪಳ ಜಿಲ್ಲೆಯಲ್ಲಿ 12,722 ಹೆಕ್ಟರ್ ಭತ್ತದ ಬೆಳೆ ಹಾನಿಯಾಗಿದೆ ಎಂದರು.
ಕೇಂದ್ರದ ನಿಯಮದ ಪ್ರಕಾರ ಪ್ರತಿ ಎಕರೆಗೆ 17ಸಾವಿರ ರೂ.ಪರಿಹಾರ ಬರಲಿದೆ. ಆಲಿಕಲ್ಲು ಮಳೆಯಿಂದ ಆಗಿರುವ ಬೆಳೆ ಹಾನಿ ಸಂಬಂಧ ನಾನು, ಸಚಿವರಾದ ಭೋಸರಾಜು, ಡಾ.ಶರಣಪ್ರಕಾಶ್ ಪಾಟೀಲ ಸೇರಿ ಮೂವರು ಮಂತ್ರಿಗಳು ಸಂಪುಟ ಸಭೆಯಲ್ಲಿ ಸಿಎಂ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಗಮನಕ್ಕೂ ತಂದಿದ್ದೇವೆ. ಅಂದೇ ರಾಯಚೂರು ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಕೆಲವು ಸೂಚನೆಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.
ನಾನೇ ತಹಶಿಲ್ದಾರ್ ಗಳ ಜತೆ ಮಾತನಾಡಿದ್ದೇನೆ. ಮಾರನೇ ದಿನವೇ ತಹಶೀಲ್ದಾರ್ಗಳು, ಗ್ರಾಮಲೆಕ್ಕಿಗರು, ಕೃಷಿ ಇಲಾಖೆ ಅಧಿಕಾರಿಗಳು ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಹಾರದ ಬಗ್ಗೆ ಸಿಎಂ ಜತೆ ಚರ್ಚಿಸಿದ್ದೇನೆ. ಬೆಳೆಹಾನಿ ಸಮೀಕ್ಷೆ ವರದಿ ಬರಲಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಎ.17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಅಂದು ಸಭೆ ಮುಗಿದ ಬಳಿಕ ನಾವು ಮೂವರು ಮಂತ್ರಿಗಳು ಹಾಗೂ ಈ ಭಾಗದ ಶಾಸಕರು ಬೆಳೆ ಹಾನಿ ಸಂಬಂಧ ಸಿಎಂ ಭೇಟಿಯಾಗಿ ಮಾತನಾಡುತ್ತೇವೆ. ಅವಕಾಶ ಸಿಕ್ಕರೆ ಸಂಪುಟ ಸಭೆಗೂ ಮುನ್ನದಿನ ಮುಖ್ಯಮಂತ್ರಿ ಅವರನ್ನು ಭೇಟಿಯಾಗುತ್ತೇವೆ ಎಂದು ಹೇಳಿದರು.
‘ಕೊಪ್ಪಳ ಕೆಆರ್ಡಿಎಲ್ ಅವ್ಯವಹಾರ ಸಂಬಂಧ ತನಿಖೆ ಆದೇಶಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕರ ಜತೆಗೂ ಮಾತನಾಡಿದ್ದೇನೆ. ಈಗಾಗಲೇ ಪ್ರಕರಣ ದಾಖಲಾಗಿದೆ. ಇದರಲ್ಲಿ ಯಾರೇ ಇದ್ದರೂ ಕ್ರಮ ಆಗಲಿದೆ. 17ಕೋಟಿ ರೂ. ಮತ್ತು 25 ಕೋಟಿ ರೂ.ಮೊತ್ತದ ಜಿಎಸ್ಟಿ ಸಂಬಂಧ ಮಾಹಿತಿ ಪಡೆದಿದ್ದೇನೆ’
-ಶಿವರಾಜ್ ಎಸ್. ತಂಗಡಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ