ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ ಭೀಮವ್ವ ಶಿಳ್ಳೆಕ್ಯಾತರ

ಕೊಪ್ಪಳ : ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ 96 ವರ್ಷದ ತೊಗಲುಗೊಂಬೆ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನಿಸಿದರು.
ತಾಲೂಕಿನ ಮೋರನಾಳ ಗ್ರಾಮದಲ್ಲಿ 1929ರಲ್ಲಿ ಜನಿಸಿದ ಭೀಮವ್ವ ಶಿಳ್ಳೆಕ್ಯಾತರ, ತೊಗಲುಗೊಂಬೆಯಾಟದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ. ತಮ್ಮ14ನೇ ವಯಸ್ಸಿನಿಂದ ಇಲ್ಲಿಯವರೆಗೂ ತೊಗಲುಗೊಂಬೆಯಾಟವನ್ನು ಕುಲಕಸುಬಾಗಿ ಮಾಡುತ್ತಾ ಕಲೆಯಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ.
ಅಮೇರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಹಾಲೆಂಡ್ ಮುಂತಾದ ದೇಶಗಳಲ್ಲಿ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳನ್ನು ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾರೆ.
ಭೀಮವ್ವ ಶಿಳ್ಳೆಕ್ಯಾತರ ಅನಕ್ಷರಸ್ಥೆಯಾದರೂ ವಂಶಪಾರಂಪರ್ಯವಾಗಿ ಬಂದ ತೊಗಲುಗೊಂಬೆಯಾಟ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇಡೀ ಜಿಲ್ಲೆಯಲ್ಲಿ ಇದೊಂದೇ ಕುಟುಂಬ ನೂರಾರು ವರ್ಷಗಳಿಂದ ತೊಗಲುಗೊಂಬೆಯಾಟವನ್ನು ಪ್ರದರ್ಶಿಸುತ್ತಾ ಬಂದಿದೆ.
ಇವರ ಮನೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜಿ ಭೀಮವ್ವ ಸಹ ಗೊಂಬೆಯಾಟ ಪ್ರದರ್ಶನಕ್ಕೆ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.