ಕಾರ್ಖಾನೆ ಮುಚ್ಚಲು ಜಿಲ್ಲಾಡಳಿತಕ್ಕೆ ಮನಸ್ಸಿಲ್ಲ: ಅಲ್ಲಮಪ್ರಭು ಬೆಟ್ಟದೂರು

ಕೊಪ್ಪಳ: ನಗರದ ಬಳಿ ಬಲ್ಡೋಟಾ ಕಂಪನಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಜನ ವಿರೋಧ ಮುಂದುವರಿದಿದ್ದು, ಸರಕಾರವೇ ಸಾರ್ವಜನಿಕ ಕೆರೆ ಮಾರಿದ ಬಗ್ಗೆ ಮಾಹಿತಿ ಕೇಳಿದರೆ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಲು ಸಮಯ ಇಲ್ಲವೆನ್ನುತ್ತಿದ್ದಾರೆ, ಅದಕ್ಕೆ ಜಿಲ್ಲಾಧಿಕಾರಿಗಳ ತುರ್ತು ವರ್ಗಾವಣೆ ಆಗಬೇಕಿದೆ ಎಂದು ಹೋರಾಟಗಾರ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಆಗ್ರಹಿಸಿದರು.
ಈ ಕುರಿತು ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು ಅಲ್ಲಿನ ಜನತೆಗೆ ತೀವ್ರ ಸ್ವರೂಪದ ಕಾಯಿಲೆಗಳು ಬಂದಿವೆ, ಕ್ಯಾನ್ಸರ್ ಕಾರಕ ಪರಿಸರ ಹಾನಿ ಆದರೂ ಸಹ ನಮಗೆ ಮಾಹಿತಿ ಇಲ್ಲ. ಪರಿಸರ ಇಲಾಖೆ ಇದೆಯೋ ಇಲ್ವೋ, ಇದ್ದರೆ ಎಲ್ಲಿದೆ, ಅವರು ಸತ್ತು ಹೋಗಿದ್ದಾರಾ? ಎಂದು ಅವರು ಪ್ರಶ್ನಿಸಿದರು.
ಪ್ರಗತಿಪರ ಹೋರಾಟಗಾರ ಕೆ. ಬಿ. ಗೋನಾಳ ಅವರು ಮಾತನಾಡಿ, ಬೇರೆ ತಾಲೂಕಿನ ಜನ ಬಂದು ಇಲ್ಲಿ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟು ಕಾರ್ಖಾನೆ ಅವರಿಂದ ಏನೋ ಲಾಭ ಪಡೆದುಕೊಳ್ಳಲು ಬರುತ್ತಿದ್ದಾರೆ ಅವರನ್ನು ನಿರ್ಲಕ್ಷ್ಯ ಮಾಡಬೇಕು, ಅವರು ಎಂದೂ ಜನರಪರ ಹೋರಾಟ ಮಾಡಿದವರಲ್ಲ ಎಂಬುದನ್ನು ಈ ಮೂಲಕ ತಿಳಿಯಪಡಿಸುತ್ತೇವೆ ಎಂದರು.
ಮಂಗಳವಾರ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾರ್ಖಾನೆ ಆರಂಭವಾದರೆ ಆಗುವ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಸ್ಥಳದಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಕಾರ್ಯದರ್ಶಿ ಮತ್ತು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಾರ್ಖಾನೆ ಕೆಲಸ ಸ್ಥಗಿತ ಮಾಡಲು ಕ್ರಮ ಕೈಗೊಂಡು ವರದಿ ನೀಡಲು ಸೂಚಿಸಿದ್ದರು. ಆದರೆ ಕಾರ್ಖಾನೆ ಆವರಣದಲ್ಲಿ ಇಂದು (ಬುಧವಾರ) ವಾಹನಗಳ ಸಾಗಾಟ, ಮಣ್ಣು ಸಮತಟ್ಟು ಮಾಡಿಕೊಳ್ಳುವ ಹಾಗೂ ಜೆಸಿಬಿಗಳ ಓಡಾಟ ಸೇರಿದಂತೆ ಕಾರ್ಖಾನೆ ಪ್ರಾಭಿಸುವ ಕಾರ್ಯಗಳು ನಡೆದಿದ್ದವು.
ಈ ಸಂದರ್ಭದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಜ್ಯೋತಿ ಎಂ. ಗೊಂಡಬಾಳ, ನಝೀರ್ ಸಾಬ್ ಮೂಲಿಮನಿ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಮಂಜುನಾಥ ಜಿ. ಗೊಂಡಬಾಳ, ಕಾಶಪ್ಪ ಚಲವಾದಿ, ಮುದಕಪ್ಪ ಹೊಸಮನಿ ಇತರರು ಇದ್ದರು.