ಗಂಗಾವತಿ:ಕರ್ತವ್ಯ ಲೋಪ ಆರೋಪ; ಆನೆಗೊಂದಿ ಪಿಡಿಒ ಅಮಾನತು

ಕೊಪ್ಪಳ/ ಗಂಗಾವತಿ: ಕರ್ತವ್ಯ ಲೋಪದ ಆರೋಪದ ಮೇಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಅವರು ಆದೇಶ ಹೊರಡಿಸಿದ್ದಾರೆ.
ಕರ್ತವ್ಯದಲ್ಲಿ ಗೈರು ಇರುವುದು, ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಗೃಹ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಪಾವತಿಸಲು ವಿಳಂಬ, ವಿವಿಧ ಯೋಜನೆಗಳ ನಿರ್ವಹಣೆಯಲ್ಲಿ ವಿಫಲತೆ, ಸಾರ್ವಜನಿಕರು ಬಳಸಿದ ಚರಂಡಿ ನೀರು, ಮಲ-ಮೂತ್ರಗಳ ತ್ಯಾಜ್ಯ ಸೇರಿ ಘನತಾಜ್ಯ ತುಂಗಭದ್ರಾ ನದಿಗೆ ಹರಿಯುತ್ತಿರುವಾಗ ನೈರ್ಮಲ್ಯ ಕಾಪಾಡುವಲ್ಲಿ ವಿಫಲ ಹೀಗೆ ಹತ್ತು ಹಲವು ಕರ್ತವ್ಯ ಲೋಪವೆಸಗಿದ್ದಾರೆ ಎಂದು ತಿಳಿದು ಬಂದಿರುವುದರಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಇದಲ್ಲದೆ ಪ್ರವಾಸೋದ್ಯಮ ಇಲಾಖೆಗೆ ಕೊಠಡಿ ನೀಡಲು ಜಿಲ್ಲಾಧಿಕಾರಿಗಳು ನೀಡಿದ ಆದೇಶದ ಉಲ್ಲಂಘಿಸಿದ ಆರೋಪ ಅವರ ಮೇಲಿದೆ. ಆನೆಗೊಂದಿ ನವ ವೃಂದಾವನ ಯಾಂತ್ರಿಕ ನಾವೆಯ ಅಲ್ಪಾವಧಿ ಟೆಂಡರ್ ಅಂತಿಮಗೊಳಿಸದೇ ಇರುವ ಕಾರಣ ಟಿ.ಎಸ್.ಗೋಪಿಕೃಷ್ಣ ಎಂಬ ವ್ಯಕ್ತಿ ಧಾರವಾಡದ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ಇವುಗಳಲ್ಲಿ ಕರ್ತವ್ಯ ಲೋಪ ಎಸಗಿದ್ದೀರಾ ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಪಿಡಿಒ ಅವರು ಸೂಕ್ತ ಕಾರಣಗಳನ್ನು ನೀಡದೇ ಇರುವುದರಿಂದ ಮುಂದಿನ ಆದೇಶ ಬರುವವರೆಗೆ, ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.