ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರಕಾರ ಬದ್ಧ: ಡಿ.ಕೆ ಶಿವಕುಮಾರ್
ಕೊಪ್ಪಳ: ‘ತುಂಗಾಭದ್ರಾ ನದಿಗೆ ಶಿವಮೊಗ್ಗ ಸಮೀಪದಲ್ಲಿ ನವಲಿ ಸಮಾನಾಂತರ ಜಲಾಶಯ ಸ್ಥಾಪಿಸಲು ಸರಕಾರ ಬದ್ಧವಾಗಿದ್ದು, ಈ ಬಗ್ಗೆ ಚರ್ಚೆ ಮಾಡಲು ಸಮಯ ಕೇಳಿ ಆಂಧ್ರ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಂತ್ರಿಗಳು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಶಾಸಕರು ನನ್ನ ಬಳಿ ಬಂದು ನವಲಿ ಸಮಾನಾಂತರ ಜಲಾಶಯ ಸ್ಥಾಪಿಸಲು ಒತ್ತಾಯಿಸಿದ್ದಾರೆ. ಈ ಬಗ್ಗೆ ಮೂರು ರಾಜ್ಯಗಳ ಸಚಿವರು ಚರ್ಚೆ ಮಾಡಬೇಕೆಂದು ಪತ್ರ ಬರೆದಿದ್ದೇನೆ. ಆಂಧ್ರಪ್ರದೇಶದವರು ಚುನಾವಣೆಯಲ್ಲಿ ನಿರತರಾಗಿರಬೇಕು. ಹೀಗಾಗಿ ಚರ್ಚೆ ಮಾಡಲು ಅವರು ಸಮಯ ನೀಡಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಮೂರು ರಾಜ್ಯಗಳ ಸಚಿವರು ಕೂತು ಚರ್ಚೆ ಮಾಡಿ, ಪೋಲಾಗುತ್ತಿರುವ 30 ಟಿಎಂಸಿ ನೀರನ್ನು ಬಳಸಿಕೊಳ್ಳಲು ಮುಂದಾಗುತ್ತೇವೆ. ಇದರಿಂದ ಮೂರು ರಾಜ್ಯಗಳಿಗೆ ಅನುಕೂಲವಾಗಲಿದೆ. ಹೂಳು ತೆಗೆಯುವುದಕ್ಕಿಂತ ಹೊಸ ಸಮತೋಲಿತ ಜಲಾಶಯ ನಿರ್ಮಾಣ ಉತ್ತಮ ಆಯ್ಕೆಯಾಗಿದೆ. ಈ ಭಾಗದ ಜನರ ಅನುಕೂಲಕ್ಕಾಗಿ ನಾವು ಜಲಾಶಯ ನಿರ್ಮಾಣಕ್ಕೆ ಬದ್ಧವಾಗಿದ್ದೇವೆ. ಸಿಎಂ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ನಾನು ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿದ್ದಾಗ ಈ ಬಗ್ಗೆ ಚರ್ಚೆ ಆಗಿತ್ತು. ಈಗ ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಅವರು ನುಡಿದರು.
ಸರಕಾರದಿಂದ ಸಹಕಾರ: ‘ಬಹಳ ವರ್ಷಗಳಿಂದ ಗವಿಸಿದ್ದೇಶ್ವರ ಮಠದ ಇತಿಹಾಸ ಕೇಳಿದ್ದೇನೆ. ಎರಡು ಮೂರು ಬಾರಿ ಭೇಟಿ ನೀಡಿದ್ದೆ. ಈ ವರ್ಷ ಈ ದೊಡ್ಡ ಜಾತ್ರೆಯಲ್ಲಿ ಭಾಗವಹಿಸಲು ಸಂತೋಷದಿಂದ ಇಲ್ಲಿಗೆ ಬಂದಿದ್ದೇನೆ. ಈ ಮಠದಿಂದ ಸಾಮಾಜಿಕ ಕ್ರಾಂತಿ ನಡೆಯುತ್ತಿರುವ ಬಗ್ಗೆಯೂ ನನಗೆ ಮಾಹಿತಿ ಇದೆ. ಈ ಕಾರ್ಯಕ್ಕೆ ಸಹಕಾರ, ಪ್ರೋತ್ಸಾಹ ನೀಡಲು ಸರಕಾರದ ಪ್ರತಿನಿಧಿಯಾಗಿ ಬಂದಿದ್ದೇನೆ ಎಂದು ಹೇಳಿದರು.