ಕೊಪ್ಪಳ: ಕ.ನೀ.ನಿ.ನಿ ಕಾರ್ಯಪಾಲಕ ಅಭಿಯಂತರ ಕಚೇರಿ ಪೀಠೋಪಕರಣ ಜಪ್ತಿಗೆ ನ್ಯಾಯಾಲಯ ಆದೇಶ
ಹಿರೇಹಳ್ಳ ಯೋಜನೆಯ ಭೂಸಂತ್ರಸ್ತ ರೈತರಿಗೆ ಪರಿಹಾರ ವಿಳಂಬ ಹಿನ್ನೆಲೆಯಲ್ಲಿ ಕ್ರಮ
ಕೊಪ್ಪಳ: ಹಿರೇಹಳ್ಳ ಯೋಜನೆಗಾಗಿ ಭೂಸ್ವಾಧೀನ ಮಾಡಿದ್ದ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಕಾರಣಕ್ಕೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಡ್ಯಾಂ ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕ.ನೀ.ನಿ.ನಿ.) ಕಾರ್ಯಪಾಲಕ ಅಭಿಯಂತರ ಕಚೇರಿಯ ಪೀಠೋಪಕರಣ ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಅರಕೇರಿ ಗ್ರಾಮದ ಭೂಮಿಯನ್ನು ಹಿರೇಹಳ್ಳ ಯೋಜನೆ ಅಡಿಯಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಯೋಜನೆಯಿಂದ ಅರಕೇರಿ ಗ್ರಾಮದ 10 ಎಕರೆ 27 ಗುಂಟೆ, ವಿಸ್ತೀರ್ಣದ ಭೂಮಿ ಮುಳುಗಡೆ ಆಗಿತ್ತು.
ಇದರಲ್ಲಿ ಭೂಮಿ ಕಳೆದುಕೊಂಡಿದ್ದ ದಿವಂಗತ ಈಶಪ್ಪ ಬಡಿಗೇರ್ ರವರ ವಾರಸುದಾರರಿಗೆ 40,09,254 ರೂ. ಮೊತ್ತವನ್ನು ಪರಿಹಾರವಾಗಿ ನೀಡಬೇಕಾಗಿತ್ತು. ಆದರೆ ಈ ಮೊತ್ತವನ್ನು ಪಾವತಿಸುವಲ್ಲಿ ವಿಳಂಬ ಮಾಡಲಾಗಿದೆ ಎಂದು ಭೂ ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯವು ಕೊಪ್ಪಳ ತಾಲೂಕಿನ ಮುನಿರಾಬಾದ್ ಡ್ಯಾಂ ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕ.ನೀ.ನಿ.ನಿ.) ಕಾರ್ಯಪಾಲಕ ಅಭಿಯಂತರ ಕಚೇರಿಯ ಪೀಠೋಪಕರಣ ಜಪ್ತಿ ಮಾಡಿ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಅದರಂತೆ ನ್ಯಾಯಾಲಯದ ಪ್ರತಿನಿಧಿ ಸಮು ದಲ್ಲಿ ಕಚೇರಿಯ ಎಲ್ಲಾ ಪೀಠೋಪಕರಣಗಳನ್ನು ಜಪ್ತಿ ಮಾಡಿಸುತ್ತಿದ್ದೇವೆ ಎಂದು ರೈತರ ಪರ ವಕಾಲತ್ತು ವಹಿಸಿದ ನ್ಯಾಯವಾದಿ ಸಂಗಮೇಶ್ ಎಸ್. ಮಾಹಿತಿ ನೀಡಿದ್ದಾರೆ.