ಕೊಪ್ಪಳ | ʼಶುಲ್ಕವನ್ನು ಪಾವತಿಸಿಲ್ಲʼ ಎಂದು ವಿದ್ಯಾರ್ಥಿಗಳನ್ನು ಶಾಲೆಯ ಕೋಣೆಯಲ್ಲಿ ಕೂಡಿಹಾಕಿದ ಮುಖ್ಯಸ್ಥರು : ಆರೋಪ
ಕೊಪ್ಪಳ : ನಗರದ ನಿವೇದಿತಾ ಎಂಬ ಖಾಸಗಿ ಶಾಲೆಯಲ್ಲಿ ಶುಲ್ಕ ಪಾವತಿಸಿಲ್ಲ ಎಂದು ಸುಮಾರು 20 ಮಕ್ಕಳನ್ನು ಮನೆಗೆ ಬಿಡದೆ ಶಾಲೆಯ ಕೋಣೆಯಲ್ಲಿ ಕೂಡಿ ಹಾಕಲಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಸಂಜೆ ಶಾಲೆಯ ಅವಧಿ ಮುಗಿದ ನಂತರ ಮಕ್ಕಳನ್ನು ಮನೆಗೆ ಕಳುಹಿಸದೇ ಕೋಣೆಯಲ್ಲಿ ಬಂಧಿಸಿ, ಪಾಲಕರು ಬರುವವರೆಗೂ ಬಿಡಬಾರದು ಎಂಬ ಉದ್ದೇಶದಿಂದ ಕೂಡಿ ಹಾಕಿದ್ದರು ಎನ್ನಲಾಗಿದೆ. ಪಾಲಕರು ಶಾಲೆ ಬಿಟ್ಟು ಸುಮಾರು ಹೊತ್ತು ಕಳೆದರೂ ಮಕ್ಕಳು ಮನೆಗೆ ವಾಪಸಾಗಿಲ್ಲ ಎಂದು ಪೋಷಕರು ಶಾಲೆಗೆ ಬಂದಿದ್ದಾರೆ. ಆಗ ಮಕ್ಕಳನ್ನು ಕೋಣೆಯಲ್ಲಿ ಕೂಡಿಹಾಕಿದ್ದ ದೃಶ್ಯಗಳ ಕಂಡು ಬಂದಿದೆ. ಈ ವೇಳೆ ಶಾಲಾ ಆಡಳಿತ ಮಂಡಳಿಯ ನಡೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಪಾಲಕರು ಶಾಲಾ ಮುಖ್ಯಸ್ಥರ ಜೊತೆ ಮಾತುಕತೆಗೆ ಮುಂದಾದಾಗ "ಶಾಲೆಯ ಶುಲ್ಕ ಕಟ್ಟಿಲ್ಲ , ನಿಮಗೆ ಶುಲ್ಕ ಕಟ್ಟಬೇಕು ಎಂದು ಮಾಹಿತಿ ತಿಳಿಸಿದ್ದೇವೆ. ಆದರೂ ನೀವು ನಿರ್ಲಕ್ಷ್ಯ ಮಾಡಿದ ಕಾರಣಕ್ಕೆ ಕೂಡಿ ಹಾಕಲಾಗಿದೆ" ಎಂದು ಶಾಲೆಯ ಮುಖ್ಯಸ್ಥರು ಮಾತನಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
“ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಕೂಡಿ ಹಾಕಿರುವುದು ಸರಿಯಲ್ಲ. ಏನೇ ಇದ್ದರೂ ನಮ್ಮನ್ನು ಶಾಲೆಗೆ ಕರೆಸಿ, ತಿಳಿಸಬೇಕಿತ್ತು. ಈ ರೀತಿಯ ನಡೆ ಸರಿಯಲ್ಲ. ಇದು ತಪ್ಪು” ಎಂದು ಪೋಷಕರು ವಿರೋಧ ವ್ಯಕ್ತಪಡಿಸಿದಾಗ, ಮಕ್ಕಳನ್ನು ಬಿಟ್ಟು ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಾಲಾ ಮುಖ್ಯಸ್ಥರ ಹಾಗೂ ವಿದ್ಯಾರ್ಥಿಗಳ ಪಾಲಕರ ಮಧ್ಯೆ ವಾದ-ವಿವಾದ ತಾರಕ್ಕೇರಿದಾಗ ಮಕ್ಕಳನ್ನು ಮನೆಗೆ ಬಿಟ್ಟು ಕಳುಹಿಸಿದ್ದಾರೆ ಎಂದು ವಿದ್ಯಾರ್ಥಿಯ ಪೋಷಕರೊಬ್ಬರು ಮಾಹಿತಿ ನೀಡಿದ್ದಾರೆ.
"ನಾವು ಶುಲ್ಕ ಕಟ್ಟಿದ್ದೇವೆ ಆದರೂ ನಮ್ಮ ಮಕ್ಕಳನ್ನು ಕೂಡಿಹಾಕಿದ್ದಾರೆ. ನಿವೇದಿತ ಶಾಲೆಯಲ್ಲಿ ಓದುವಂತಹ ಎಲ್ಲಾ ಮಕ್ಕಳು ಬಡವರ ಮಕ್ಕಳು, ಶುಲ್ಕ ಕಟ್ಟೋದೂ ತಡವಾಗಬಹುದು, ಆದರೂ ಮಕ್ಕನ್ನು ಇವರು ಕೂಡಿಹಾಕಿದ್ದಾರೆ. ನಾನು ಹೋಗಿ ನೋಡಿದಾಗ 5.30ಗಂಟೆ ಆಗಿತ್ತು. ಹಸಿವಿನಿಂದ ಬಳಲಿ ಮಕ್ಕಳೆಲ್ಲಾ ಆಳುತ್ತಿದ್ದರು. ನಾನು ಕೇಳಿದರೆ ಶುಲ್ಕ ಕಟ್ಟುವವರೆಗೆ ನಾವು ಬಿಡುವುದಿಲ್ಲ. ಇವರ ಪಾಲಕರು ಬರಲಿ ಶುಲ್ಕ ಕಟ್ಟಿದ ಮೇಲೆ ಬಿಡುತ್ತೇವೆ ಎಂದು ಶಾಲೆ ಮುಖ್ಯಸ್ಥರು ಹೇಳಿದರು"
- ಸಲಿಂ ಅಳವಂಡಿ,ಪಾಲಕರು
"ಶುಲ್ಕ ಕಟ್ಟಿಲ್ಲ ಎಂದು ಮಕ್ಕಳನ್ನು ಕೂಡಿಹಾಕುವುದು ಸರಿಯಲ್ಲ. ನಮಗೆ ಮಾಹಿತಿ ಇರಲಿಲ್ಲ, ಬೇರೆಯವರಿಂದ ಮಾಹಿತಿ ಪಡೆದುಕೊಂಡಿದ್ದೇವೆ. ನಾಳೆ ಶಾಲೆಗೆ ಭೇಟಿ ಕೊಡುತ್ತೇವೆ. ಘಟನೆಯ ಬಗ್ಗೆ ವಿವರವಾಗಿ ಮಾಹಿತಿ ಪಡೆದು ಶಾಲೆಯ ಮೇಲೆ ಕ್ರಮ ಕೈಗೊಳ್ಳುತ್ತೇವೆ"
ಶಂಕರಯ್ಯ, ಬಿಇಒ