ಕೊಪ್ಪಳ | ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥಾ
ಕಾನೂನಿನ ಕುರಿತು ಭಯ ಇರುವಂತೆ ನೋಡಿಕೊಳ್ಳುವ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ : ಅಂಬಣ್ಣ ಆರೋಲಿಕರ್
ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ದಲಿತರ ವಿರುದ್ಧದ ದೌರ್ಜನ್ಯಗಳನ್ನು ವಿರೋಧಿಸಿ ದಲಿತ ಪರ ಸಂಘಟನೆಗಳು ಹಾಗೂ ಕೊಪ್ಪಳದ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಆರಂಭಗೊಂಡಿದೆ.
ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಬುಧವಾರ ಆರಂಭಗೊಂಡ ಸಂಗನಾಳ ಚಲೋ ಜಾಥಾಕ್ಕೆ ದಲಿತ ಪರ ಹೋರಾಟಗಾರರು ಸಾಮೂಹಿಕವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಪರ ಹೋರಾಟಗಾರ ಅಂಬಣ್ಣ ಆರೋಲಿಕರ್, ಈ ಹಿಂದೆ ಇಡೀ ರಾಜ್ಯಾದ್ಯಂತ ವಿವಿಧ ಕಡೆ ದಲಿತರ ಮೇಲೆ ದೌರ್ಜನಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳು ಆಯಾ ಗ್ರಾಮಕ್ಕೆ ಭೇಟಿ ನೀಡಿ ಇದರ ವಿರುದ್ಧ ಕಟ್ಟುನಿಟ್ಟಾದ ಕ್ರಮವನ್ನು ಕೈಗೊಳ್ಳುತ್ತಿದ್ದರು. ಘಟನೆಗಳಿಗೆ ಕಾರಣಿ ಕರ್ತರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿ ಕಟ್ಟುನಿಟ್ಟಾಗಿ ಕಾನೂನು ಕ್ರಮ ಜರಗಿಸುವ ಮತ್ತು ಕಾನೂನಿನ ಕುರಿತು ಭಯ ಇರುವಂತೆ ನೋಡಿಕೊಳ್ಳುವ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣಕ್ಕಾಗಿಯೇ ಈಗಲೂ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ದಲಿತರ ಮೇಲೆ ದೌರ್ಜನ್ಯಗಳು ಈ ಹಿಂದಿಗಿಂತ ಈ ಕಾಲದಲ್ಲಿ ಹೆಚ್ಚಾಗಿವೆ, ಇದನ್ನು ಕಾನೂನಿನ ಮೂಲಕವೇ ಕಟ್ಟುನಿಟ್ಟಾಗಿ ತಡೆಗಟ್ಟಬೇಕಿದೆ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವ ಕಟ್ಟುನಿಟ್ಟಾದ ಅಧಿಕಾರಿಗಳ ಅವಶ್ಯಕತೆ ಇದೆ. ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೆ ಕಾನೂನು ಕ್ರಮ ಕೈಗೊಂಡರೆ ಖಂಡಿತವಾಗಿಯೂ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, ಈ ರೀತಿಯ ಘಟನೆಗಳು ಸಂಭವಿಸಿದಾಗ ಜಿಲ್ಲಾಮಟ್ಟದ ಅಧಿಕಾರಿಗಳು ಆ ಗ್ರಾಮಕ್ಕೆ ತೆರಳಿ ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕು ಹಾಗೂ ಅದಕ್ಕೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಾದ ಕ್ರಮವನ್ನು ಜರುಗಿಸಬೇಕು. ಮತ್ತೊಮ್ಮೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮೊದಲ ದಿನದ ಕಾಲ್ನಡಿಗೆ ಜಾಥವು ಜಿಲ್ಲಾಧಿಕಾರಿಗಳ ಕಚೇರಿಯಿಂದ ತೆರಳಿ ಭಾನಾಪುರವನ್ನು ತಲುಪಿತು. ನಾಳೆ ಬೆಳಿಗ್ಗೆಯಿಂದ ಸಂಗನಾಳ ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಜಾಥಾ ದಲ್ಲಿ ಕೊಪ್ಪಳದ ವಿವಿಧ ಪ್ರಗತಿಪರ ಸಂಘಟನೆಗಳು ಭಾಗಿಯಾಗಿವೆ.
ಈ ಸಂದರ್ಭದಲ್ಲಿ ಟಿ ರತ್ನಾಕರ್, ಶುಕ್ರಜ ತಾಲ್ಕೇರಿ, ಸಂಘಟಕರಾದ ಬಸವರಾಜ ಸೂಳಿಭಾವಿ, ಮುತ್ತು ಬಿಳಿಯಲಿ, ಶ್ರೀಪಾದ ಭಟ್, ಶಶಿಕಲಾ ಮಠ, ಸಲೀಮಾ ಜಾನ, ಜನಾರ್ದನ, ಎಂಆರ್ ಬೇರಿ, ಗೌರಿ ಗೋನಾಳ, ಮರಿಯಮ್ಮ, ಆನಂದ ಶಿಂಗಾಡಿ, ಖಾಸೀಮ್ ಸರ್ದಾರ, ಡಿ.ಎಂ ಬಡಿಗೇರ್, ಡಿ.ಹೆಚ್ ಪೂಜಾರ್, ನಝೀರ್ ಮೂಲಿಮನಿ, ಕೊಪ್ಪಳ ಮುಸ್ಲಿಂ ಯುನಿಟಿಯ ಎಂ ಡಿ ಜಿಲಾನ್ ಕಿಲ್ಲೆದಾರ್, ಮಲ್ಲು ಪೂಜಾರಿ, ಪರಶುರಾಮ ಕೆರಳ್ಳಿ, ಕರಿಯಪ್ಪ ಗುಡಿಮನಿ ಮತ್ತು ಹಾಲಕೇರಿ ಸೇರಿದಂತೆ ಸಾವಿರಾರು ಜನ ಜಾಥಾದಲ್ಲಿ ಪಾಲ್ಗೊಂಡಿದ್ದರು.