ಕೊಪ್ಪಳ | ಮನೆಯ ಪಕ್ಕದಲ್ಲೇ ಸಾರ್ವಜನಿಕ ಶೌಚಾಲಯ ನಿರ್ಮಾಣ : ವಿರೋಧಿಸಿದ್ದಕ್ಕೆ ದಲಿತರ ಮೇಲೆ ಹಲ್ಲೆ
ಹಲ್ಲೆಗೊಳಗಾದ ಜನರು
ಕೊಪ್ಪಳ/ಕಾರಟಗಿ : ದಲಿತರ ಮನೆಯ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ದಲಿತರ ಮೇಲೆ ಸವರ್ಣೀಯರು ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಪುರ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಕಾರಟಗಿ ಉಪ ವಿಭಾಗ ಆಸ್ಪತ್ರೆ ಮತ್ತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸುಮಾರು 30ಕ್ಕಿಂತ ಹೆಚ್ಚು ಜನರ ಮೇಲೆ ಹಲ್ಲೆಯಾಗಿದೆ ತಿಳಿದು ಬಂದಿದೆ.
ಮನೆಯ ಪಕ್ಕದಲ್ಲಿ ಶೌಚಾಲಯ ಕಟ್ಟಿಸಬೇಡಿ, ಸರಕಾರಿ ಜಾಗದಲ್ಲಿ ಶೌಚಾಲಯ ನಿರ್ಮಿಸಿ ಎಂದು ದಲಿತರು ಹೇಳಿದ್ದಕ್ಕೆ, ಸವರ್ಣೀಯರು ಮತ್ತು ದಲಿತರ ಮಧ್ಯೆ ಜಗಳ ನಡೆದು ಘರ್ಷಣೆಯಾಗಿದೆ. ಈ ವೇಳೆ ದಲಿತರ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ ಎಂದು ತಿಳಿದು ಬಂದಿದೆ.
ಶೌಚಾಲಯ ಬೇರೆಡೆ ನಿರ್ಮಿಸಬೇಕೆಂದು ಹಲವು ಬಾರಿ ಗ್ರಾಮದಲ್ಲಿ ಸಭೆಗಳಾಗಿವೆ. ಪಿಡಿಒ, ತಾಲೂಕು ಅಧಿಕಾರಿ, ತಹಶೀಲ್ದಾರ್ ಕೂಡ ಗ್ರಾಮದಲ್ಲಿ ಸಭೆ ನಡೆಸಿ, ತೆರಳಿದ ನಂತರ ವಿವಾದ ಉಂಟಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು 28 ಜನರ ವಿರುದ್ಧ ಕಾರಟಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಈವರೆಗೆ ಯಾರ ಬಂಧನ ಆಗಿಲ್ಲ.