ಕೊಪ್ಪಳ | ಕ್ಷೌರಿಕನಿಂದ ದಲಿತ ಯುವಕನ ಹತ್ಯೆ: ಆರೋಪಿಯ ಬಂಧನ
ದಲಿತನೆಂಬ ಕಾರಣಕ್ಕೆ ಕ್ಷೌರ ನಿರಾಕರಿಸಿದ್ದರಿಂದ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯ
ಕೊಪ್ಪಳ, ಆ.18: ಕ್ಷೌರ ಮಾಡಿಸಲು ಬಂದ ದಲಿತ ಯುವಕನಿಗೆ ಕ್ಷೌರ ಮಾಡಲು ನಿರಾಕರಿಸಿದ್ದಲ್ಲದೆ, ಪ್ರಶ್ನಿಸಿದ ಯುವಕನನ್ನು ಕತ್ತರಿಯಿಂದ ಇರಿದು ಕೊಲೆಗೈದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಯಮನೂರಪ್ಪ ಬಂಡಿಹಾಳ ಕೊಲೆಯಾದ ಯುವಕ. ಸಂಗನಾಳ ಗ್ರಾಮದಲ್ಲಿ ಸಲೂನ್ ಮಾಲಕ ಮುದುಕಪ್ಪ ಹಡಪದ ಕೊಲೆ ಆರೋಪಿ. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಯಮನೂರಪ್ಪ ಕ್ಷೌರ ಮಾಡಿಸಿಕೊಳ್ಳಲು ಮುದುಕಪ್ಪ ಹಡಪದನ ಸಲೂನ್ ಗೆ ಹೋಗಿದ್ದರು. ಈ ವೇಳೆ ದಲಿತನಾಗಿರುವ ಕಾರಣ ಯಮನೂರಪ್ಪರಿಗೆ ಕ್ಷೌರ ಮಾಡಲು ಮುದುಕಪ್ಪ ಹಡಪದ ನಿರಾಕರಿಸಿದನೆನ್ನಲಾಗಿದೆ. ಇದಕ್ಕೆ ಯಮನೂರಪ್ಪ ಆಕ್ಷೇಪಿಸಿದಾಗ ಅವರೊಳಗೆ ಮಾತಿಗೆ ಮಾತು ಬೆಳೆದಿದೆ. ವಾಗ್ವಾದ ತಾರಕಕ್ಕೇರಿದಾಗ ಮುದುಕಪ್ಪ ಹಡಪದ ತನ್ನ ಕೈಯಲ್ಲಿದ್ದ ಕತ್ತರಿಯಿಂದ ಯಮನೂರಪ್ಪ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಯಲಬುರ್ಗಾ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿ ಮುದುಕಪ್ಪ ಹಡಪದನನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.