ಕೊಪ್ಪಳ | ಪಾಳು ಬಿದ್ದ ಕಾರ್ಖಾನೆ ಶುಚಿಗೊಳಿಸುವಾಗ ಕಾರ್ಮಿಕ ಮೃತ್ಯು; ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮಾರುತಿ ಕೊರಗಲ್ ಮೃತವ್ಯಕ್ತಿ
ಕೊಪ್ಪಳ : ಜಿಲ್ಲೆಯ ಗಿಣಿಗೇರಾ ಕೈಗಾರಿಕಾ ಪ್ರದೇಶದಲ್ಲಿರುವ ಕಾಮಿನಿ ಇಸ್ಫಾತ್ ಐರನ್ ಆಂಡ್ ಸ್ಪಾಂಜ್ ಎಂಬ ಕಾರ್ಖಾನೆ ಶುಚಿಗೊಳಿಸುವಾಗ ಆಮ್ಲಜನಕ ಕೊರತೆಯಾಗಿ ಓರ್ವ ಕಾರ್ಮಿಕ ಮೃತಪಟ್ಟು, ಹತ್ತಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ತಾಲೂಕಿನ ಅಲ್ಲಾನಗರ ಗ್ರಾಮದ ನಿವಾಸಿ ಮಾರುತಿ ಕೊರಗಲ್ (24) ಮೃತವ್ಯಕ್ತಿ ಎಂದು ಗುರುತಿಸಲಾಗಿದೆ. ಓರ್ವ ಕಾರ್ಮಿಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಕಾರ್ಖಾನೆಯ ಒಂದು ಭಾಗವಾದ ಸಿಡಿ ಡಿಸ್ಚಾರ್ಜ್ ಎನ್ನುವ ಘಟಕ ಸುಮಾರು ದಿನಗಳಿಂದ ಕಾರ್ಯನಡೆಸದೆ ಸ್ಥಗಿತಗೊಂಡಿತ್ತು, ಅದನ್ನು ಸ್ವಚ್ಚಗೊಳಿಸಿ ಮತ್ತೆ ಕೆಲಸ ಆರಂಭಿಸಬೇಕೆಂದು ನಾಲ್ಕು ಜನ ಕಾರ್ಮಿಕರನ್ನು ಕಳುಹಿಸಲಾಗಿತ್ತು, ಸಿಡಿ ಡಿಸ್ಚಾರ್ಜ್ ಎಂಬ ಘಟಕದಲ್ಲಿ ಇಳಿದ ಕಾರ್ಮಿಕರಿಗೆ ಆಮ್ಲಜನಕದ ಕೊರತೆಯಾಗಿ ಅಲ್ಲೆ ಅಸ್ವಸ್ಥಗೊಂಡಿದ್ದಾರೆ.
ಅವರನ್ನು ಕರೆತರಲು ಮತ್ತಷ್ಟು ಜನ ಕಾರ್ಮಿಕರು ಹೋಗಿದ್ದಾರೆ, ಆದರೆ ಒಳಗೆ ಹೋದ ಎಲ್ಲ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.
ಎಲ್ಲಾ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದ್ದು, ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.