ಕೊಪ್ಪಳ | ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕರಿಂದ ದೇವದಾಸಿ ಮಹಿಳೆಯರ ಭೂಮಿ ಕಬಳಿಕೆ : ಆರೋಪ

ಕೊಪ್ಪಳ : ದೇವದಾಸಿ ಮಹಿಳೆಯರಿಗೆ ಪನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ನೀಡಲಾಗಿದ್ದ ಜಮೀನುಗಳನ್ನು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಸವರಾಜ್ ದಡೇಸುಗೂರು ಅವರು ಭೂಕಬಳಿಕೆ ಮಾಡಿದ್ದಾರೆ ಎಂದು ಸಿಂಧನೂರಿನ ಪ್ರಜಾ ಜಾಗೃತಿ ಸಂಘಟನೆಯ ಅಧ್ಯಕ್ಷ ಎಚ್.ಜಗದೀಶ್ ವಕೀಲರು ಆರೋಪಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಂಧನೂರು ತಾಲೂಕಿನ ಧಡೇಸೂರು ಗ್ರಾಮದಲ್ಲಿ ಸರ್ಕಾರದ ವತಿಯಿಂದ 1990-91 ರಲ್ಲಿ ಸುಮಾರು 70-80 ಎಕರೆ ವಿಸ್ತೀರ್ಣ ಹೊಂದಿದ ಜಮೀನುಗಳನ್ನು ದೇವದಾಸಿ ಪುನರ್ವಸತಿ ಯೋಜನೆಯಡಿಯಲ್ಲಿ ಅವರ ಶ್ರೇಯೋಭಿವೃದ್ಧಿಗಾಗಿ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಅವರ ಜೀವನೋಪಾಯ ರೂಪಿಸಿಕೊಳ್ಳುವ ಸದುದ್ದೇಶದಿಂದ ಖುದ್ದು ಸರ್ಕಾರವೇ ಇಂಥವರ ಬಗೆಗಿನ ಕಾಳಜಿಯಿಂದ ಜಮೀನನ್ನು ಹಂಚಿಕೆ ಮಾಡಲಾಗಿತ್ತು.
ಜಮೀನುಗಳನ್ನು ಕನಕಗಿರಿ ಕ್ಷೇತ್ರದ ಮಾಜಿ ಶಾಸಕರು ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ಧಡೇಸ್ಗೂರು ದೇವದಾಸಿ ಮಹಿಳೆಯರಿಗೆ ನೀಡಿರುವ ಭೂಮಿಯು ಕನಿಷ್ಟ 20 ವರ್ಷ ಅವರ ಸ್ವಾಧೀನದಲ್ಲಿರಬೇಕು ಎಂಬ ನಿಯಮ ಇದ್ದರೂ, ಲಂಚಬಾಕ ಅಧಿಕಾರಿಗಳ ಸಹಾಯದಿಂದ ಕಾನೂನನ್ನು ಉಲ್ಲಂಘಿಸಿ ಜಮೀನುಗಳನ್ನು ಫಲಾನುಭವಿಗಳಿಂದ ಪಡೆದಿರುತ್ತಾರೆ ಎಂದು ಅವರು ಹೇಳಿದರು.
ದೇವದಾಸಿ ಮಹಿಳೆಯರ ಜಮಿನುಗಳನ್ನು ನೀರು ಕೊಡುಸುತ್ತೇನೆ ಎಂದು ಹೇಳಿ ಅವರಿಂದ ಸಹಿ ಪಡೆಯಲಾಗಿದೆ ಮತ್ತು ಕೇಳಿದರೆ ಯಾವ ಜಮೀನು ಇಲ್ಲ ನಾನು ಹಣ ಕೊಟ್ಟು ತೆಗೆದುಕೊಂಡಿದ್ದೇನೆ ಎಂದು ಹೇಳುತ್ತಾರೆ. ಆ ಜಮೀನುಗಳನ್ನು ಈಗಾಗಲೆ ಭೂಪರಿವರ್ತನೆ ಮಾಡಲಾಗಿದೆ ಎಂದು ಅರೋಪಿಸಿದರು.
ಸಿಂಧನೂರು ತಾಲೂಕು ಸಾಲಗುಂದಾ ಹೋಬಳಿಯ ಧಡೇಸ್ಗೂರು ಗ್ರಾಮದ ಸರಕಾರಿ ಖಾರೀಜ ಖಾತಾ ಸುಮಾರು 30 ಎಕರೆಗೂ ಅಧಿಕ ಜಮೀನುಗಳನ್ನು 2006-07ರಲ್ಲಿ ಮಾಜಿ ಶಾಸಕರಾದ ಬಸವರಾಜ ದಢಸೂರು ತನ್ನ ಹೆಸರಲ್ಲಿ ಮತ್ತು ಪತ್ನಿ, ತಂದೆ, ಸೇರಿದಂತೆ ಇತರೆ ಸಂಬಂಧಿಕರಿಗೆ ಮಂಜೂರಾತಿ ಮಾಡಿಸಿಕೊಂಡಿದ್ದು, ದೇವದಾಸಿ ಮಹಿಳೆಯರಿಗೆ ಆದ ಅನ್ಯಾಯದ ಕುರಿತು ಮತ್ತು ಸರಕಾರಿ ಖಾರೀಜಿ ಖಾತಾ ಜಮೀನುಗಳನ್ನು ಕಾನೂನು ಬಾಹಿರ ಮತ್ತು ಅಕ್ರಮವಾಗಿ ಮಂಜೂರಾತಿ ಮಾಡಿಸಿಕೊಂಡಿರುವ ಕುರಿತು ಸಮಗ್ರವಾಗಿ ಅಧಿಕೃತ ದಾಖಲಾತಿಗಳೊಂದಿಗೆ ತಿಳಿಸ ಬಯಸುತ್ತೇನೆ ಎಂದ ಅವರು, ಸರಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮಾಜಿ ಶಾಸಕ ಬಸವರಾಜ ದಡೇಸೂರು ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿರಬೇಕು ಎಂದು ಆಗ್ರಹಿಸಿದರು.
ನೊಂದ ದೇವದಾಸಿ ಮಹಿಳೆಯರಿಗೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಿ, ಜಮೀನುಗಳನ್ನು ಪುನಃ ಅವರವರ ಹೆಸರಿಗೆ ಮಾಡಿಸಬೇಕು. ಅಲ್ಲದೆ ಭಾರೀ ದೌರ್ಜನ್ಯಕ್ಕೆ ಹೆದರಿರುವ ಅವರ ಜಮೀನುಗಳನ್ನು ಹದ್ದುಬಸ್ತು ಮಾಡಿಸಿ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ ಅವರು, ಶೀಘ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾನಪ್ಪ ಜವಳಗೇರಿ, ಗಂಗಮ್ಮ, ಕನಕಮ್ಮ, ಕೊರಮ್ಮ ಉಪಸ್ಥಿತರಿದ್ದರು.
ಜಮೀನಿಗೆ ನೀರು ಬಿಡಿಸುತ್ತೆನೆ ಎಂದು ನಿಮ್ಮ ಹೊಲ ಕೊಡಿ ಎಂದು ಹೇಳಿ ಬಸವರಾಜ್ ಧಡೇಸ್ಗೂರು ಸಹಿ ಮಾಡಿಸಿಕೊಂಡಿದ್ದಾರೆ, ಅಂದಿನಿಂದ ಇಲ್ಲಿಯವರೆಗೆ ನಮ್ಮ ಜಮೀನಿನಲ್ಲಿ ಬರಲು ಬಿಟ್ಟಿಲ್ಲ, ಕೇಳಿದರೆ ನಿನ್ನ ಭೂಮಿ ಎಲ್ಲಿದೆ ಎಂದು ಹೊಡೆಯಲು ಬರುತ್ತಾರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ನನ್ನ ಮಗ ಹೋಗಿ ಕೇಳಿದರೆ ದೇವದಾಸಿ ಮಗನಾಗಿ ನನಗೆ ಉತ್ತರ ಕೇಳುತ್ತಿಯ ಎಂದು ಹೇಳುತ್ತಾರೆ. ನನ್ನ ಆಸ್ತಿ ನನಗೆ ಕೊಡಿಸಿ.
- ಹಾಲಮ್ಮ, ದೇವದಾಸಿ ಮಹಿಳೆ