ಕೊಪ್ಪಳ | ಸಂಗಣ್ಣ ಕರಡಿಗೆ ತಪ್ಪಿದ ಟಿಕೆಟ್: ಬೆಂಬಲಿಗರಿಂದ ಬಿಜೆಪಿ ಕಚೇರಿಗೆ ನುಗ್ಗಿ ದಾಂಧಲೆ
ಬಿಜೆಪಿ ಅಭ್ಯರ್ಥಿ ಡಾ.ಬಸವರಾಜರಿಗೆ ತರಾಟೆ
ಸಂಗಣ್ಣ ಕರಡಿ
ಕೊಪ್ಪಳ, ಮಾ.14: ಲೋಕಸಭಾ ಚುನಾವಣೆಗೆ ಕೊಪ್ಪಳದಿಂದ ಬಿಜೆಪಿ ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆ ಭಿನ್ನಮತ ಕಾಣಿಸಿಕೊಂಡಿದ್ದು, ಹಾಲಿ ಸಂಸದ ಸಂಗಣ್ಣ ಕರಡಿಯವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅವರ ಬೆಂಬಲಿಗರು ಆಕ್ರೋಶಿತರಾಗಿದ್ದಾರೆ. ಇಂದು ಬೆಳಗ್ಗೆ ಸಂಗಣ್ಣ ಕರಡಿ ಬೆಂಬಲಿಗ ಕಾರ್ಯಕರ್ತರು ಬಿಜೆಪಿ ಕಚೇರಿಗೆ ನುಗ್ಗಿ ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಕೆ.ಬಸವರಾಜರಿಗೆ ಟಿಕೆಟ್ ಘೋಷಣೆಯಾಗಿದೆ. ಸಂಗಣ್ಣ ಕರಡಿಗೆ ಟಿಕೆಟ್ ತಪ್ಪಿದ್ದರಿಂದ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಗ್ಲಾಸ್ ಹೊಡೆದು ಹಾಕಿ ಆಕ್ರೋಶ ಹೊರ ಹಾಕಿದ ಸಂಗಣ್ಣ ಬೆಂಬಲಿಗರು ಬಿಜೆಪಿ ಅಭ್ಯರ್ಥಿ ಬಸವರಾಜ ಹಾಗೂ ಮುಖ್ಯ ಸಚೇತಕ ದೊಡ್ಡನಗೌಡ ಮಾಧ್ಯಮ ಗೋಷ್ಠಿ ಮಧ್ಯೆ ನುಗ್ಗಲು ಯತ್ನಿಸಿದ್ದಾರೆ. ಅಭ್ಯರ್ಥಿ ಹಾಗೂ ಬಿಜೆಪಿಗೆ ಧಿಕ್ಕಾರ ಕೂಗಿದರು. ಕಚೇರಿಗೆ ನುಗ್ಗಿ ಕುರ್ಚಿ, ಭಾರತ ಮಾತೆಯ ಫೋಟೊ, ಕಿಟಕಿ ಗ್ಲಾಸ್ ಒಡೆದರು.
ಸಂಗಣ್ಣ ಮನೆಗೆ ಆಗಮಿಸಿದ ಡಾ.ಬಸವರಾಜ ವಿರುದ್ಧ ಆಕ್ರೋಶ
ಇಂದು ಬೆಳಗ್ಗೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಬಸವರಾಜ ಅವರು ವಿಧಾನಸಭೆಯ ವಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಜೊತೆಗೆ ಕರಡಿ ಸಂಗಣ್ಣ ಮನೆಗೆ ಆಗಮಿಸಿದರು. ಈ ವೇಳೆ ಡಾ. ಬಸವರಾಜ ವಿರುದ್ಧ ಸಂಗಣ್ಣ ಬೆಂಬಲಿಗ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಯಾರನ್ನು ಕೇಳಿ ಟಿಕೆಟ್ ಪಡೆದಿದ್ದೀರಿ ಎಂದು ತರಾಟೆಗೈದ ಸಂಸದರ ಬೆಂಬಲಿಗರು, ಕರಡಿ ಸಂಗಣ್ಣ ಪರ ಘೋಷಣೆ ಕೂಗಿದರು.