ಮುಡಾ ಪ್ರಕರಣ | ಕೇಂದ್ರದ ಅಣತಿಯಂತೆ ರಾಜ್ಯಪಾಲರ ಕುಣಿತ : ಸಚಿವ ತಂಗಡಗಿ ಟೀಕೆ
ಶಿವರಾಜ್ ತಂಗಡಗಿ
ಕೊಪ್ಪಳ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಕುಣಿಸಿದಂತೆ ಕುಣಿಯುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ದೂರಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿ.ಜೆ.ಅಬ್ರಹಾಂ ಓರ್ವ ಬ್ಲಾಕ್ ಮೇಲರ್. ಆತನ ವಿರುದ್ಧ ಸುಪ್ರೀಂಕೋರ್ಟ್ 20 ಲಕ್ಷ ರೂ. ದಂಡ ಹಾಕುವ ಮೂಲಕ ಛೀಮಾರಿ ಹಾಕಿ ಕಳುಹಿಸಿದೆ. ಅಂತಹ ವ್ಯಕ್ತಿ ರಾಜ್ಯಪಾಲರಿಗೆ ಬೆಳಗ್ಗೆ 11.30ಕ್ಕೆ ದೂರು ನೀಡಿದರೆ, ಸಂಜೆ 6 ಗಂಟೆ ವೇಳೆಗೆ ಮುಖ್ಯಮಂತ್ರಿಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದಾರೆ. ಇದನ್ನು ನೋಡಿದರೆ ರಾಜಪಾಲರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಹೇಳಿದಂತೆ ಕುಣಿಯುತ್ತಿರುವುದು ಗೊತ್ತಾಗುತ್ತಿದೆ ಎಂದು ಹೇಳಿದರು.
ರಾಜ್ಯಪಾಲರ ನಡೆಯನ್ನು ಕನ್ನಡಿಗರು, ಕರ್ನಾಟಕದ ಜನತೆ ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಮುಡಾದಲ್ಲಿ ಅವ್ಯವಾರವಾಗಿದೆ ಎಂಬ ವಿಚಾರ ಕೇಳಿ ಬಂದ ಕೂಡಲೇ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಂಗ ತನಿಖೆಗೆ ವಹಿಸಿದ್ದಾರೆ. ನ್ಯಾಯಾಂಗ ತನಿಖೆ ಆಗುತ್ತಿದೆ. ತನಿಖೆ ನಡೆದು ಬಿಜೆಪಿಗರ ಬಣ್ಣ ಬಯಲಾಗಲಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಲವು ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಆ ಪ್ರಕರಣದ ತನಿಖೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ 60.4 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಅದನ್ನು ಯಾವ ತನಿಖೆಗೆ ವಹಿಸಿದ್ದರು? ಯಾರನ್ನು ಬಂಧಿಸಿದ್ದಾರೆ? ಇನ್ನು ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ 47 ಕೋಟಿ ರೂ. ಅವ್ಯವಹಾರ ನಡೆದಿದೆ. ಅಂದು ನಿಗಮದ ಅಧ್ಯಕ್ಷರಾಗಿದ್ದ ವೀರಯ್ಯನನ್ನು ನಾವು ಬಂದಿಸಿದ್ದೇವೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ್ ಏಕೆ ತುಟಿ ಬಿಚ್ಚುವುದಿಲ್ಲ. ಮೂರು ಕೋಟಿ ಹಣ ನೇರವಾಗಿ ವೀರಯ್ಯನ ಖಾತೆಗೆ ಜಮೆಯಾಗಿದೆ. ಆ ಹಣದಲ್ಲಿ ವೀರಯ್ಯ ನಾಗರಬಾವಿ ಸಮೀಪ ಭವ್ಯ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಮಿತ್ರರು ರಾಜ್ಯದ ಜನತೆಗೆ ಉತ್ತರ ನೀಡಲಿ ಎಂದು ಅವರು ಆಗ್ರಹಿಸಿದರು.
ಇನ್ನು ಯಡಿಯೂರಪ್ಪ ಅವರ ಅವಧಿಯಲ್ಲಿ ಕರಕುಶಲ ಅಭಿವೃದ್ಧಿ ನಿಗಮದಲ್ಲಿ 22.40 ಕೋಟಿ ರೂ.ಗಳನ್ನು ಖಾಸಗಿ ವ್ಯಕ್ತಿಯ ಖಾತೆಗೆ ಜಮೆ ಮಾಡಲಾಗಿದೆ. ಈ ಹಗರಣಗಳ ಬಗ್ಗೆ ಮಾತನಾಡದ ಬಿಜೆಪಿ ನಾಯಕರು ಯಾವ ಮುಖ ಇಟ್ಟುಕೊಂಡು ಮೈಸೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೋ. ಬಿಜೆಪಿ ನಾಯಕರ ಬಣ್ಣವನ್ನು ಒಂದೊಂದಾಗಿ ಬಯಲು ಮಾಡುತ್ತೇವೆ ಎಂದು ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.