ಕೊಪ್ಪಳ | ಬಂಡಾಯ ಅಭ್ಯರ್ಥಿಯಾಗಿ ಹಾಲಿ ಸಂಸದ ಸಂಗಣ್ಣ ಕರಡಿ ಸ್ಪರ್ಧಿಸುವ ಸಾಧ್ಯತೆ?
Photo: facebook.com/SangannaKaradiBJP/
ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸಂಗಣ್ಣ ಕರಡಿ ಅವರಿಗೆ ಈ ಬಾರಿಯ ಬಿಜೆಪಿ ಟಿಕೆಟ್ ಸಿಗದ ಕಾರಣ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಕೊಪ್ಪಳದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಂಗಣ್ಣ ಬೆಂಬಲಿಗರ ಸಭೆ ಗುರುವಾರ (ಮಾ. 21) ಆಯೋಜನೆಯಾಗಿದ್ದು, ಸಭೆಯ ಬಳಿಕ ಅವರು ತಮ್ಮ ಸ್ಪರ್ಧೆ ಸಂಬಂಧ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ವಿರುದ್ದ ಬೆಂಬಲಿಗರ ಅಸಮಾಧಾನ
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ ಜಯಗಳಿಸಿದ್ದ ಸಂಗಣ್ಣ ಕರಡಿ ಅವರು ಈ ಬಾರಿ ಕೂಡ ತನಗೆ ಟಿಕೆಟ್ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ, ಬಿಜೆಪಿ ಹೈಕಮಾಂಡ್, ಸಂಗಣ್ಣ ಕರಡಿ ಬದಲಿಗೆ, ವೈದ್ಯರಾಗಿರುವ ಡಾ. ಬಸವರಾಜ್ ಅವರಿಗೆ ಈ ಬಾರಿಯ ಟಿಕೆಟ್ ಘೋಷಣೆ ಮಾಡಿದೆ. ಇದು ಸಂಗಣ್ಣ ಕರಡಿ ಮತ್ತು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಸಂಗಣ್ಣ ಕರಡಿ ನಾಳೆ ಬೆಂಬಲಿಗರ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ.