ವಿಠಲಾಪುರ: ಕೊಲೆಯಾದ ಮರಿಯಮ್ಮರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ, ಸಂಸದ ಭೇಟಿ
ಕೊಪ್ಪಳ/ಗಂಗಾವತಿ: ವಿಠಲಾಪುರ ಗ್ರಾಮದಲ್ಲಿ ಈಚೆಗೆ ಕೊಲೆಯಾದ ಪರಿಶಿಷ್ಟ ಜಾತಿಯ ಮರಿಯಮ್ಮ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಸಂಸದ ಕೆ.ರಾಜಶೇಖರ ಹಿಟ್ನಾಳ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಸಚಿವ ತಂಗಡಗಿ ಮಾತನಾಡಿ ಮರಿಯಮ್ಮ ಅವರ ತವರು ಮನೆಯ ಕುಟುಂಬಕ್ಕೆ ವಿಶೇಷ ಅನುದಾನದಲ್ಲಿ ಪರಿಹಾರ ನೀಡುವಂತೆ ಸೂಚಿಸಿದರು.
ಪರಿಶಿಷ್ಟರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕೊಲೆ ಪ್ರಕರಣಗಳನ್ನು ಪೊಲೀಸರು ಕಡಿವಾಣ ಹಾಕಬೇಕು ಈ ನಿಟ್ಟಿನಲ್ಲಿ ಜಾಗೃತಿ ಸಭೆಗಳನ್ನು ನಡೆಸಬೇಕೆಂದು ಪ್ರಗತಿಪರ
ಸಂಘಟನೆಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಪಾಮಣ್ಣ ಅರಳಿನೂರ ಕೋರಿದರು.
ಜಿಲ್ಲಾಧಿಕಾರಿ ನಳಿನ್ ಆತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಜಿಲ್ಲಾ ಪಂ. ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಬಸವಂತ ಗೌಡ, ಮುಖಂಡ ಪಾಮಣ್ಣ ಅರಳಿಗನೂರ ಹಾಗೂ ದಲಿತ ಪರ ಸಂಘಟನೆಗಳ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು.