ಕೊಪ್ಪಳ | ಅಂತರ್ಜಾತಿ ವಿವಾಹವಾದ ಯುವತಿಯ ಕೊಲೆ ಖಂಡಿಸಿ ಕಾಲ್ನಡಿಗೆ ಜಾಥಾ
ಕೊಪ್ಪಳ : ಅಂತರ್ಜಾತಿ ವಿವಾಹವಾದ ಯುವತಿಯನ್ನು ವಿಷವುಣಿಸಿ ಕೊಲೆ ಮಾಡಿದ ಪ್ರಕರಣವನ್ನು ಖಂಡಿಸಿ ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಜಂಟಿಯಾಗಿ ʼವಿಠಲಾಪುರ ಚಲೋ ಜಾಥಾʼ ಮೆರವಣಿಗೆ ನಡೆಸಿದರು.
ವಿಠಲಾಪುರ ಗ್ರಾಮದಿಂದ ಗಂಗಾವತಿ ನಗರದ ಡಿವೈಎಸ್‌ಪಿ ಕಚೇರಿಗೆ ತೆರಳಿ ಡಿವೈಎಸ್‌ಪಿ ಸಿದ್ಧಲಿಂಗಪ್ಪ ಗೌಡ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
ಯುವತಿ ದೌರ್ಜನ್ಯ ಖಂಡಿಸಿ ಮಾತನಾಡಿದ ಕರಿಯಪ್ಪ ಗುಡಿಮನಿ ಅವರು, ಪ್ರೀತಿಸಿ ನಂಬಿಸಿ ವಿವಾಹವಾಗಿ ಆಕೆಯನ್ನು ಮಾದಿಗ ಜಾತಿ ಸೇರಿದ ಕಾರಣಕ್ಕೆ ವಿಷವುಣಿಸಿ ಹತ್ಯೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿದ್ದು, ದಿನನಿತ್ಯ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕೋಕೆ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ಲಕ್ಷ್ಯ ಕಾರಣವೇ ಎದ್ದು ಕಾಣುತ್ತಿದೆ ಎಂದು ಹೇಳಿದರು.
ಜಾಥಾದಲ್ಲಿ ಕರ್ನಾಟಕ ಜನಶಕ್ತಿ ಮುಖಂಡ ಕುಮಾರ್ ಸಮತಳ, ಕೆವಿಎಸ್ ಮುಖಂಡ ದುರುಗೇಶ್ ಬರಗೂರು, ಹಿರಿಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಟಿ ರತ್ನಾಕರ, ಶ್ರೀನಾಥ ಪೂಜಾರಿ, ಶುಕ್ರರಾಜ, ಸಿರಾಜ ಸಿದ್ದಾಪುರ, ಮಾರೆಪ್ಪ ಹರವಿ, ಎಂ.ಆರ್ ಭೇರಿ, ಗುರುಬಸವ, ಇನ್ನಿತರರು ಹಾಜರಿದ್ದರು.