ಹಲವು ವರ್ಷಗಳ ನಿರಂತರ ಹೋರಾಟದ ಫಲವಾಗಿ ನಮ್ಮ ರಾಜ್ಯ ಉದಯವಾಯಿತು: ಸಚಿವ ತಂಗಡಗಿ
ಕೊಪ್ಪಳ:ಆಲೂರು ವೆಂಕಟರಾವ್ ಅವರು ಕರ್ನಾಟಕ ಏಕೀಕರಣದ ಕನಸನ್ನು ಕಂಡ ಮೊದಲ ವ್ಯಕ್ತಿಯಾಗಿದ್ದರು. ಬ್ರಿಟಿಷರ ಅಧಿಕಾರದ ಅವಧಿಯಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವು ಏಕೀಕರಣ ಚಳವಳಿ ಮತ್ತು ಹಲವು ವರ್ಷಗಳವರೆಗಿನ ನಿರಂತರ ಹೋರಾಟದ ಪ್ರತಿಫಲವಾಗಿ 1956ರ ನವೆಂಬರ್ 01 ರಂದು ನಮ್ಮ ರಾಜ್ಯ ಉದಯವಾಯಿತು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಜಿಲ್ಲಾ ಕ್ರಿಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ಯ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಪ್ರಗತಿಗೆ ಭದ್ರ ಬುನಾದಿ ಹಾಕಿದ ಅಂದಿನ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸುರವರ ಗಟ್ಟಿ ನಿರ್ಧಾರದಿಂದ 1973ರ ನವೆಂಬರ್ 01 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದರು ಎಂದರು.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕೊಪ್ಪಳ ಜಿಲ್ಲೆಯ ಪಾತ್ರ ಪ್ರಮುಖವಾದುದಾಗಿದೆ. ಕೊಪ್ಪಳ ಜಿಲ್ಲೆಯ ಅಳವಂಡಿ ಶಿವಮೂರ್ತಿಸ್ವಾಮಿ, ಶಿರೂರು ವೀರಭದ್ರಪ್ಪ ತೆಗ್ಗಿನಮನಿ, ಶಂಕರಗೌಡ್ರು, ಪ್ರಭುರಾಜ ಪಾಟೀಲ್ ಸಂಗನಾಳ, ಪಂಚಾಕ್ಷರಿ ಹಿರೇಮಠ, ಸೋಮಪ್ಪ ಡಂಬಳ, ದೇವೇಂದ್ರಕುಮಾರ ಹಕಾರಿ, ಭೀಮನಗೌಡ ಪಾಟೀಲ್, ಹನುಮರಡ್ಡಿ ಕಲ್ಗುಡಿ, ಪಂಚಪ್ಪ ಶೆಟ್ಟರು, ಹಂಜಿ ಕೊಟ್ರಪ್ಪ, ಮುಂತಾದವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು ಎಂದರು.
ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿಯಲ್ಲಿ 2023ರ ಆಗಸ್ಟ್ 1 ರಿಂದ 2024ರ ಸೆಪ್ಟೆಂಬರ್ 30ರವರೆಗೆ ಒಟ್ಟು 2,74,780 ಗ್ರಾಹಕರು ಈ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ,ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಆಗಸ್ಟ್-2024ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 3.21,487 ಫಲಾನುಬಾವಿಗಳಿದ್ದು ಈವರೆಗೆ 3.10,703 ಫಲಾನುಭವಿಗಳಿಗೆ ತಿಂಗಳಿಗೆ ಎರಡು ಸಾವಿರ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸಂದರ್ಭದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಜಿಲ್ಲಾಧಿಕಾರಿ ನಳಿನ್ ಅತುಲ್, ಸಿಇಒ ರಾಹುಲ್ ರತ್ನನಮ್ ಪಾಂಡೆ, ಎಸ್ಪಿ ರಾಮ್ ಎಲ್.ಅರಸಿದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.