ಸೇವಾ ನ್ಯೂನತೆ: ಎಲೆಕ್ಟ್ರಿಕ್ ವಾಹನ ಕಂಪನಿಗೆ 83,782 ರೂ. ದಂಡ ವಿಧಿಸಿದ ನ್ಯಾಯಾಲಯ

ಸಾಂದರ್ಭಿಕ ಚಿತ್ರ | PC : ANI
ಕೊಪ್ಪಳ : ವಾಹನಕ್ಕೆ ಸಂಬಂಧಿಸಿದ ಆರ್.ಸಿ, ಇನ್ಯೂರೇನ್ಸ್ ಪಾಲಸಿ ಮತ್ತು ಸರ್ವಿಸ್ ಬುಕ್ ಇತ್ಯಾದಿ ದಾಖಲಾತಿಗಳನ್ನು ನೀಡದೇ ಸೇವಾ ನ್ಯೂನತೆ ಎಸಗಿದ ಎಲೆಕ್ಟ್ರಿಕ್ ಟೆಕ್ನೋಲೋಜೀಸ್ ಪ್ರೈವೇಟ್ ಲಿಮಿಟೆಡ್ಗೆ 83,782 ರೂ. ಸೇರಿದಂತೆ ಹತ್ತು ಸಾವಿರ ಬಡ್ಡಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ನೀಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ :
ಮಂಜುನಾಥ ಸಾಲಿಮಠ್ ತಂದೆ ಬಸಯ್ಯ ಸಾಲಿಮಠ್ ಎಂಬುವರು ವ್ಯವಸ್ಥಾಪಕ ನಿರ್ದೇಶಕರು, ಎಲೆಕ್ಟ್ರಿಕ್ ಟೆಕ್ನೋಲೋಜೀಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಮತ್ತು ಧಾರವಾಡ ಶಾಖೆಯ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿದ್ದರು.
ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಸಲುವಾಗಿ 1,11,709 ರೂ. ಗಳನ್ನು ಪಾವತಿಸಿದ್ದು, ಈ ವಾಹನವು ಕೊಪ್ಪಳ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ 2022ರ ಸೆಪ್ಟೆಂಬರ್ 28 ರಂದು ನೋಂದಣಿಯಾಗಿದ್ದು, ವಾಹನದ ನೊಂದಣಿ ಸಂಖ್ಯೆ ಕೆಎ37/ಇಎನ್9055 ಎಂದು ಇರುತ್ತದೆ. ಎಲೆಕ್ಟ್ರಿಕ್ ಟೆಕ್ನೋಲೋಜೀಸ್ ಪ್ರೈವೇಟ್ ಲಿಮಿಟೆಡ್ ಅವರು ಈ ವಾಹನವನ್ನು ಮಂಜುನಾಥ ಸಾಲಿಮಠ್ ಸುಪರ್ದಿಗೆ ನೀಡಿದ್ದರು.
ಆದರೆ ಈ ವಾಹನಕ್ಕೆ ಸಂಬಂಧಿಸಿದ ಆರ್.ಸಿ, ಇನ್ಯೂರೇನ್ಸ್ ಪಾಲಸಿ ಮತ್ತು ಸರ್ವಿಸ್ ಬುಕ್ ಇತ್ಯಾದಿ ದಾಖಲಾತಿಗಳನ್ನು ನೀಡುವುದಾಗಿ ಹೇಳಿ ಇದುವರೆಗೆ ನೀಡಿರುವುದಿಲ್ಲ, ಈ ವಾಹನವು ಕೆಲವು ತಿಂಗಳ ನಂತರ ರಿಪೇರಿಗೆ ಬಂದಿದ್ದು, ವಾಹನವನ್ನು ರಿಪೇರಿ ಮಾಡಿಕೊಡಬೇಕಾಗಿ ಇ-ಮೇಲ್ ಮೂಲಕ ಮಂಜುನಾಥ ಸಾಲಿಮಠ್ ಕಂಪನಿಗೆ ತಿಳಿಸಿದ್ದರು.
ಆದರೆ ಕಂಪನಿಯವರು ಯಾವುದೇ ರೀತಿಯ ರಿಪೇರಿ ಮಾಡಿಕೊಟ್ಟಿರುವುದಿಲ್ಲ. ಮಂಜುನಾಥ ಸಾಲಿಮಠ್ ಅವರು ಸಾಕಷ್ಟು ಸಲ ದೂರವಾಣಿ ಮೂಲಕ ಮನವಿ ಮಾಡಿದ ನಂತರ ಎಲೆಕ್ಟ್ರಿಕ್ ಟೆಕ್ನೋಲೋಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ತಮ್ಮ ನೌಕರರನ್ನು ಕಳುಹಿಸಿ ವಾಹನವನ್ನು ರಿಪೇರಿಗಾಗಿ ತೆಗೆದುಕೊಂಡು ಹೋಗಿದ್ದರು.
ಈವರೆಗೂ ರಿಪೇರಿ ಮಾಡಿಕೊಡದೇ ವಾಹನವನ್ನು ಹಿಂದಿರುಗಿಸದೇ ಇದ್ದುದರಿಂದ ಮಂಜುನಾಥ್ ಅವರು ಕಂಪನಿಗೆ ತಮ್ಮ ವಕೀಲರ ಮೂಲಕ ವಾಹನವನ್ನು ನೀಡುವಂತೆ ಅಥವಾ ವಾಹನಕ್ಕೆ ಪಾವತಿಸಿದ ಖರೀದಿ ಮೊತ್ತವನ್ನು ಹಿಂದಿರುಗಿಸುವಂತೆ ನೋಟಿಸನ್ನು ನೀಡಿದ್ದರು. ಆದರೂ ಇದಕ್ಕೆ ಸ್ಪಂದಿಸದ ಕಂಪನಿ ನಿರ್ಲಕ್ಷ ತೋರಿ ಸೇವಾ ನ್ಯೂನತೆ ಎಸಗಿದ್ದರಿಂದ ಮಂಜುನಾಥ ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರ ಪೀಠವು ದೂರುದಾರರ ವಾದವನ್ನು ಆಲಿಸಿ ಉಂಟಾದ ಸೇವಾ ನ್ಯೂನತೆಗಾಗಿ ಹಾಗೂ ಅನುಚಿತ ವ್ಯಾಪಾರ ಪದ್ಧತಿಗಾಗಿ ಕಂಪನಿಯು ಮಂಜುನಾಥ ಅವರಿಂದ ಪಡೆದ ವಾಹನ ಖರೀದಿ ಮೊತ್ತ 1,11,709 ರೂ. ಗಳಲ್ಲಿ ಮಂಜುನಾಥ ಅವರು ಖರೀದಿಸಿದ ವಾಹನವನ್ನು ಸುಮಾರು 10 ತಿಂಗಳ ಕಾಲ ಉಪಯೋಗಿಸಿದ್ದರಿಂದ ಶೇ 25 ರಷ್ಟು ಹಣ ಸವಕಳಿ ಕಳೆದು ಶೇಕಡಾ 75 ರಷ್ಟು ಹಣ ಅಂದರೆ ರೂ. 83,782 ರೂ. ಗಳನ್ನು ಕಂಪನಿಯು ವಾಹನ ಮಾಲಿಕರಿಗೆ ಪಾವತಿಸುವಂತೆ ಹಾಗೂ ಈ ಹಣಕ್ಕೆ ದೂರು ದಾಖಲಾದ ದಿನದಿಂದ ಪಾವತಿಯಾಗುವವರೆಗೆ ವಾರ್ಷಿಕ ಶೇ.9ರ ಬಡ್ಡಿ ಸಮೇತ ವಾಹನಮಾಲಕರಿಗೆ ನೀಡುವಂತೆ ಆದೇಶಿಸಿದೆ.
ಇದರ ಜೊತೆಗೆ ಅರ್ಜಿದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ 10,000 ರೂ. ಗಳನ್ನು ಹಾಗೂ ದೂರಿನ ಖರ್ಚು 5,000 ರೂ. ಗಳನ್ನು ಈ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಪಾವತಿಸುವಂತೆ ಎಲೆಕ್ಟ್ರಿಕ್ ಟೆಕ್ನೋಲೋಜೀಸ್ ಪ್ರೈವೇಟ್ ಲಿಮಿಟೆಡ್ಗೆ ಆದೇಶವನ್ನು ನೀಡಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.