ತೃತೀಯ ಲಿಂಗಿಗಳ ಬದುಕಿನ ಬಗ್ಗೆ ಸಮಗ್ರವಾದ ಮಾಹಿತಿ ನೀಡುವ ಕೃತಿ
ಇಂದಿನ ಸಂದರ್ಭದಲ್ಲಿ ‘ಬಿಂಬದೊಳಗೊಂದು ಬಿಂಬ’ ಕೃತಿಯು ತೃತೀಯ ಲಿಂಗಿಗಳ ಅಸ್ತಿತ್ವ ಮತ್ತು ಸಾಮಾಜಿಕ ಸಂಘರ್ಷದ ಕುರಿತಾಗಿ ಭಾರತೀಯ ಹಿನ್ನೆಲೆ ಮತ್ತು ದೃಷ್ಟಿಕೋನದಲ್ಲಿನ ಡಾ. ರೇಶ್ಮಾ ಉಳ್ಳಾಲ್ ಅವರ ಈ ಸಂಶೋಧನೆಯು ತೃತೀಯ ಲಿಂಗಿ ಸಮುದಾಯದ ಬದುಕನ್ನು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಸಾರ್ವಜನಿಕ ವಲಯವು ಚರ್ಚಿಸುವುದು ಬಹುಮುಖ್ಯವಾದದ್ದು ಎಂಬ ಭಾವನೆ ನನ್ನದು.
..ಎಪ್ರಿಲ್ 15, 2014ರಲ್ಲಿ ಸುಪ್ರೀಂ ಕೋರ್ಟ್‌ನಿಂದ ‘ತೃತೀಯ ಲಿಂಗಿ ಸಮುದಾಯ ಇನ್ನು ಮುಂದೆ ತಮ್ಮನ್ನು ಪುರುಷ, ಸ್ತ್ರೀ ಅಥವಾ ತೃತೀಯ ಲಿಂಗಿ ಎಂದು ಸ್ವಯಂ ಗುರುತಿಸಿಕೊಳ್ಳುವ ಮತ್ತು ಇದನ್ನು ಯಾವುದೇ ರೀತಿಯಲ್ಲೂ ಪ್ರಮಾಣೀಕರಿಸಿಕೊಳ್ಳುವ ಅವಶ್ಯಕತೆಯಿಲ್ಲ’ ಎಂಬ ಚಾರಿತ್ರಿಕ ತೀರ್ಪು ಬಂದ ನಂತರ ತೃತೀಯ ಲಿಂಗಿಗಳ ಬದುಕಿನ ಬಗ್ಗೆ ಸಾರ್ವಜನಿಕರು ಸ್ವಲ್ಪಮಟ್ಟಿಗಾದರೂ ಚರ್ಚಿಸಲು ಆರಂಭಿಸಿದರು ಎನ್ನಬಹುದು. ಇದಕ್ಕೆ ಪೂರಕವಾಗಿ ತಂತ್ರಜ್ಞಾನದ ಸಹಾಯವೂ ಇವರಿಗೆ ಬೆಂಬಲವಾಗಿ ಬಂದಿದೆ. ತೃತೀಯ ಲಿಂಗಿಗಳ ಬದುಕನ್ನು ಆಧರಿಸಿದ ಸಾಹಿತ್ಯವನ್ನು ಓದುವ ಸಾಕ್ಷ್ಯಚಿತ್ರ ಮತ್ತು ಚರ್ಚೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುವಂತಾಗಿದೆ. ಇದರಿಂದಾಗಿ ತೃತೀಯ ಲಿಂಗಿ ಸಮುದಾಯವನ್ನು ನೋಡುವ ದೃಷ್ಟಿಕೋನ ಬದಲಾಗಲು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ, ಆದರೂ ಈ ಎಲ್ಲದರಿಂದ ಕೆಲವೊಂದು ವಿವರಗಳು ಮಾತ್ರ ಲಭ್ಯವಾಗುತ್ತಿತ್ತೇ ವಿನಾ ಸಮಗ್ರವಾಗಿ ನಮಗೆ ಎಲ್ಲಿಯೂ ಏನೂ ಕೂಡಾ ಲಭ್ಯವಿರಲಿಲ್ಲ.
..ಸದರಿ ಸಂಶೋಧನೆಯಲ್ಲಿ ತೃತೀಯ ಲಿಂಗಿಗಳ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ಮತ್ತು ಮಾನಸಿಕ ಸಂಘರ್ಷವನ್ನು ಜಾಗತಿಕ ಮಟ್ಟದಲ್ಲಿ ನಿಂತು ಅವಲೋಕನ ಮಾಡಿರುವುದು ಸ್ತುತ್ಯರ್ಹ. ಇದು ಕನ್ನಡದ ಸಂದರ್ಭಕ್ಕೆ ತೃತೀಯ ಲಿಂಗಿಗಳ ಬದುಕಿನ ಬಗ್ಗೆ ಮಾಡಿರುವ ಮೊದಲ ಸಂಶೋಧನೆಯಾಗಿದ್ದು, ನಮಗೆ ಸಮಗ್ರವಾದ ಮಾಹಿತಿಯನ್ನು ನೀಡುತ್ತದೆ.
ಸದರಿ ಕೃತಿಯು ತೃತೀಯ ಲಿಂಗಿಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಸ್ಫೂರ್ತಿಯಾಗುತ್ತದೆ ಮತ್ತು ಸರಕಾರವು ಈ ಸಮುದಾಯಕ್ಕೆ ಸಿಗಬೇಕಾದ ಸವಲತ್ತು, ಹಕ್ಕುಗಳನ್ನು ನೀಡಲು ಮತ್ತು ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಹಾಯಕವಾಗುತ್ತದೆ ಎಂಬ ನಂಬಿಕೆ ನನ್ನದು.
(ಮುನ್ನುಡಿಯಿಂದ)