ಕುದ್ರೋಳಿ: ಮಂಗಳೂರು ದಸರಾಗೆ ಅದ್ದೂರಿ ಚಾಲನೆ
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ದಲ್ಲಿ ಗುರುವಾರ ಮಂಗಳೂರು ದಸರಾ ಮಹೋತ್ಸವ ಉದ್ಘಾಟನೆಗೊಂಡಿತು. ಕೇಂದ್ರದ ಮಾಜಿ ಸಚಿವ,ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ದಸರಾ ಮಹೋತ್ಸವ ಉದ್ಘಾಟಿಸಿದರು.
ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾದ ಶಾರದಾ ಮಾತೆಯ ವಿಗ್ರಹವನ್ನು ದೇವಳದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಮಾಡಿಸಿ ದರ್ಬಾರ್ ಹಾಲ್ ನಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಇದೇ ವೇಳೆ ಮಹಾ ಗಣಪತಿ ಸಹಿತ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಅ. 13 ರವರೆಗೆ ವಿಶೇಷ ಪೂಜೆ ಹಾಗೂ ಅಲಂಕಾರ ಸಹಿತ ಪೂಜಿಸಲಾಗುತ್ತದೆ.
ಉದ್ಘಾಟನೆ ವೇಳೆ ಹುಲಿವೇಷಧಾರಿಗಳಿಂದ ಕುಣಿತ ಸೇವೆ ನಡೆಯಿತು. 9 ತಿಂಗಳ ಮಗು ಕೂಡ ಹುಲಿ ವೇಷದಲ್ಲಿ ಕಂಗೊಳಿಸಿತು.
ಕುದ್ರೋಳಿ ಕ್ಷೇತ್ರವು ವಿಶೇಷ ಅಲಂಕಾರದೊಂದಿಗೆ ಕಂಗೊಳಿಸುತ್ತಿದ್ದು, ಮಂಗಳೂರು ನಗರವು ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಮಂಗಳೂರು ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಲು ಸಜ್ಜಾಗಿದೆ.
ಅ. 13ರಂದು ಸಂಜೆ ಮೆರವಣಿಗೆ ಮೂಲಕ ಮಂಗಳೂರು ದಸರಾ ಸಮಾಪನೆಗೊಳ್ಳಲಿದೆ.